Home ಟಾಪ್ ಸುದ್ದಿಗಳು ಮಧ್ಯಪ್ರದೇಶ: ಕೊಳವೆ ಬಾವಿಯೊಳಗೆ ಬಿದ್ದು, 3 ದಿನಗಳ ಕಾಲ ಸಿಲುಕಿದ್ದ 2 ವರ್ಷದ ಹೆಣ್ಣು ಮಗು...

ಮಧ್ಯಪ್ರದೇಶ: ಕೊಳವೆ ಬಾವಿಯೊಳಗೆ ಬಿದ್ದು, 3 ದಿನಗಳ ಕಾಲ ಸಿಲುಕಿದ್ದ 2 ವರ್ಷದ ಹೆಣ್ಣು ಮಗು ಮೃತ್ಯು

ಭೋಪಾಲ್: ಮಧ್ಯಪ್ರದೇಶದಲ್ಲಿ ಮೂರು ದಿನಗಳ ನಂತರ 300 ಅಡಿ ಬೋರ್‌ವೆಲ್‌ನಿಂದ ಎರಡು ವರ್ಷದ ಹೆಣ್ಣು ಮಗುವನ್ನು ಹೊರತೆಗೆಯಲಾಗಿದ್ದು ಗುರುವಾರ ಈ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಭೋಪಾಲ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಸೆಹೋರ್‌ನಲ್ಲಿ ಈ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾದ ಮಗುವಿನ ದೇಹವು ಕೊಳೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಂಗಾವಲಿ ಗ್ರಾಮದಲ್ಲಿ ಸೃಷ್ಟಿ ಎಂಬ ಕಂದಮ್ಮ ಬೋರ್‌ವೆಲ್‌ಗೆ ಬಿದ್ದಿದ್ದಳು. ಗುರುವಾರ ಸಂಜೆ 5.30ಕ್ಕೆ ಆಕೆಯನ್ನು ಹೊರತೆಗೆದು ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆಯು ಐವತ್ತು ಗಂಟೆಗಳ ಕಾಲ ನಡೆಯಿತು. ರೊಬೊಟಿಕ್ ತಂಡ ಮತ್ತು ಭಾರತೀಯ ಸೇನೆ, NDRF, SDERF ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಇದ್ದರು.

ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಾಲಕಿ 300 ಅಡಿ ಬೋರ್‌ವೆಲ್‌ಗೆ ಬಿದ್ದು 40 ಅಡಿಯಿಂದ 100 ಅಡಿ ಆಳಕ್ಕೆ ಜಾರಿದ್ದಳು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಯಂತ್ರಗಳಿಂದ ಉಂಟಾದ ಕಂಪನಗಳಿಗೆ ಅವಳು ಮತ್ತಷ್ಟು ಕೆಳಕ್ಕೆ ಹೋದಳು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಹೇಳಿದ್ದಾರೆ.

ಎಲ್ಲ ಪ್ರಯತ್ನಗಳ ಹೊರತಾಗಿಯೂ, ನಾವು ಬಾಲಕಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಇಬ್ಬರು ವೈದ್ಯರ ತಂಡವು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ದೇಹವು ಕೊಳೆತ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಸೆಹೋರ್ ಜಿಲ್ಲಾಧಿಕಾರಿ ಹೇಳಿದರು.

ಕಾರ್ಯಾಚರಣೆಯ ಸಮಯದಲ್ಲಿ, ಮಗುವಿನ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ರೋಬೋಟ್ ಅನ್ನು ಬೋರ್‌ವೆಲ್‌ಗೆ ಇಳಿಸಲಾಗಿತ್ತು. ಬಾಲಕಿಗೆ ಪೈಪ್ ಮೂಲಕ ಆಮ್ಲಜನಕವನ್ನೂ ಪೂರೈಸಲಾಗಿದ್ದರೂ, ಮಳೆ ಗಾಳಿಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗಿದೆ.

Join Whatsapp
Exit mobile version