ಭೋಪಾಲ್: ಮಧ್ಯಪ್ರದೇಶದಲ್ಲಿ 10 ದಿನಗಳ ಕಾಲ ನಡೆದ ನವರಾತ್ರಿ ಆಚರಣೆಯು ಬಾಲಕಿಯೊಬ್ಬಳ ಸಾವು, ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮತ್ತು ಘರ್ಷಣೆ ಸೇರಿದಂತೆ ಹಲವು ಅಹಿತಕರ ಘಟನೆಯೊಂದಿಗೆ ಮುಕ್ತಾಯಗೊಂಡಿದೆ.
ಗರ್ಬಾ ಸ್ಥಳಗಳಲ್ಲಿ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ ಎಂಬ ವಿವಾದಗಳ ಮಧ್ಯೆ ಇಂದೋರ್’ನಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ 11 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ತಲೆಯಲ್ಲಿ ಬುಲೆಟ್ ಅನ್ನು ಹೋಲುವ ವಸ್ತುವೊಂದನ್ನು ಮರಣೋತ್ತರ ಪರೀಕ್ಷೆಯ ವೇಳೆ ವೈದ್ಯರು ಪತ್ತೆಹಚ್ಚಿದ್ದರು. ನವರಾತ್ರಿ ಸಂಭ್ರಮಾಚರಣೆಯ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಮಧ್ಯೆ ನಗರದ ಜಬಲ್’ಪುರದಲ್ಲಿ ದುರ್ಗಾ ಪೂಜೆಯ ಮಂಟಪದಲ್ಲಿ ಪುರುಷರ ಗುಂಪೊಂದು ಮಹಿಳೆಯ ಮೇಲೆ ಆ್ಯಸಿಡ್ ಮಾದರಿಯ ರಾಸಾಯನಿಕ ದಾಳಿ ನಡೆಸಿದೆ. ಇದರಿಂದ ಮುಖಕ್ಕೆ ತೀವ್ರ ಸುಟ್ಟ ಗಾಯಗಳೊಂದಿಗೆ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಹತ್ತು ಮಂದಿ ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತೆ ಮಹಿಳೆ ತನ್ನ ತಾಯಿಯೊಂದಿಗೆ ಜಬಲ್’ಪುರ ಜಿಲ್ಲೆಯ ಸುನರ್ಹೈ ಪ್ರದೇಶದ ಬಳಿ ದುರ್ಗಾಪೂಜೆ ಪೆಂಡಾಲ್’ಗೆ ಹೋಗಿದ್ದು, ಇದ್ದಕ್ಕಿದ್ದಂತೆ ಕೆಲವು ಯುವಕರು ಆಕೆಯ ಮುಖದ ಆ್ಯಸಿಡ್ ಮಾದರಿಯ ರಾಸಾಯನಿಕದಿಂದ ದಾಳಿ ನಡೆಸಿದ್ದರು. ಇದು ಆ್ಯಸಿಡ್ ಎಂದು ಪ್ರಯೋಗಾಲಯದ ವರದಿ ದೃಢಪಡಿಸಿದ್ದು, ಇದರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುತ್ತೇವೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ ಕಳೆದ ಒಂದೂವರೆ ವಾರದಲ್ಲಿ ನಗರದ ವಿವಿದ ಕಡೆಗಳಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿವೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿವೆ.