ಭೋಪಾಲ್: ಐದು ದಶಕದಷ್ಟು ಹಳೆಯದಾದ ದರ್ಗಾವೊಂದನ್ನು ಸಂಘಪರಿವಾರದ ಕಾರ್ಯಕರ್ತರು ಧ್ವಂಸಗೊಳಿಸಿದ ಬಳಿಕ ಕೇಸರಿ ಬಣ್ಣ ಬಳಿದ ಘಟನೆ ಮಧ್ಯಪ್ರದೇಶದ ನರ್ಮದಾಪುರಂ ನಲ್ಲಿ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆಯಿಂದ ದರ್ಗಾಕ್ಕೆ ಭಾಗಶಃ ಹಾನಿಯಾಗಿದೆ ಎಂದು ಹೇಳಲಾಗಿದೆ.
ಸಂಘಪರಿವಾರದ ಕಾರ್ಯಕರ್ತರ ಈ ಕುಕೃತ್ಯವು ಬೆಳಗ್ಗಿನ ಜಾವ ಸ್ಥಳೀಯ ಯುವಕರ ಗಮನಕ್ಕೆ ಬಂದಿದ್ದು, ದರ್ಗಾದ ಬಾಗಿಲು ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ದರ್ಗಾಕ್ಕೆ ಕೇಸರಿ ಬಣ್ಣ ವಿಕೃತಿ ಮೆರೆದಿದ್ದರು ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಕೂಡ ದರ್ಗಾವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಆಕ್ರೋಶಿತ ಮುಸ್ಲಿಮರು ರಾಜ್ಯ ಹೆದ್ದಾರಿ 22 ಅನ್ನು ತಡೆದು ಆರೋಪಿಗಳನ್ನು ಬಂಧನಕ್ಕೆ ಒತ್ತಾಯಿಸಿದ್ದರು.
ಸದ್ಯ ದರ್ಗಾದ ಮರದ ಬಾಗಿಲನ್ನು ಮುರಿದು ನದಿಗೆ ಎಸೆಯಲಾಗಿದೆ. ದರ್ಗಾದ ಮಿನಾರ, ಸಮಾಧಿ ಮತ್ತು ಪ್ರವೇಶದ್ವಾರಕ್ಕೂ ಕೇಸರಿ ಬಣ್ಣ ಬಳಿಯಲಾಗಿದ್ದು, ಅಲ್ಲಿದ್ದ ನೀರಿನ ಪಂಪನ್ನು ಕಿತ್ತು ಹಾಕಲಾಗಿದೆ ಎಂದು ದರ್ಗಾ ಉಸ್ತುವಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಮಧ್ಯೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.