ಭೋಪಾಲ್: ವೃದ್ಧೆಯೊಬ್ಬರ ತಲೆಯ ಗಾಯಕ್ಕೆ ಕಾಂಡೋಮ್ನ ಕವರ್ ಇಟ್ಟು ಬ್ಯಾಂಡೇಜ್ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೋರ್ಸಾದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆಯನ್ನು ರೇಷ್ಮಾ ಬಾಯಿ ಎಂದು ಗುರುತಿಸಲಾಗಿದೆ. ತಲೆಯಲ್ಲಿ ತೀವ್ರವಾದ ಗಾಯವುಂಟಾದ ಕಾರಣ ಮೊರೆನಾದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಈ ಅಮಾನವೀಯ ಕೃತ್ಯ ನಡೆದಿದೆ ಎನ್ನಲಾಗಿದೆ.
ಗಾಯದಿಂದ ಉಂಟಾಗುವ ರಕ್ತಸ್ರಾವವನ್ನು ತಡೆಯಲು ಹತ್ತಿಯ ಜೊತೆಗೆ, ಮಹಿಳೆಯ ತಲೆಯ ಮೇಲೆ ಕಾಂಡೋಮ್ನ ಕವರ್ ಇಟ್ಟು ಬ್ಯಾಂಡೇಜ್ ಮಾಡಲಾಗಿದೆ. ಇದನ್ನು ಅಲ್ಲಿದ್ದಂತಹ ಸ್ಥಳೀಯರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಮಹಿಳೆಗೆ ಬ್ಯಾಂಡೇಜ್ ಮಾಡಿದ್ದ ಸಿಬ್ಬಂದಿಯನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.