ಎಂ. ಸಾದುಲ್ಲಾ ಅವರ ಬದುಕು ಮತ್ತು ಬರಹ

Prasthutha|

ವಿದ್ವಾಂಸ, ಗ್ರಂಥಕರ್ತ, ಸಜ್ಜನ ಎಂಬ ಸ್ಥಾನಮಾನಕ್ಕೆ ಎಲ್ಲಾ ರೀತಿಯಲ್ಲೂ ಅರ್ಹರಾದ ಎಂ. ಸಾದುಲ್ಲಾ ಸಾಹೇಬ್ ನಮ್ಮನ್ನಗಲಿದರು. ಕಳೆದ ಮೂರು ದಶಕಗಳಿಂದ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ಕನ್ನಡಿಗರಿಗೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯವಾದುದು.

- Advertisement -


ವಿಶ್ವ ವಿಖ್ಯಾತ ಕುರ್’ಆನ್ ವ್ಯಾಖ್ಯಾನ ಗ್ರಂಥ ತಫ್ಹೀಮುಲ್ ಕುರ್’ಆನ್, ಹದೀಸ್ ಸಂಗ್ರಹಗಳ ಮೇರು ಗ್ರಂಥ ಸಹೀಹುಲ್ ಬುಖಾರಿ, ದಾರಿದೀಪ, 40 ಹದೀಸ್ ಗಳು, ಪ್ರವಾದಿ (ಸ ) ಮಾದರಿ ಶಿಕ್ಷಕ, ಪ್ರವಾದಿ (ಸ ) ಲೋಕನಾಯಕ, ಅಂತಿಮ ಪ್ರವಾದಿ ಮುಹಮ್ಮದ್ (ಸ), ಸುಖ ದಾಂಪತ್ಯ, ತಂದೆಯ ಅಂತಿಮ ಉಪದೇಶ, ಭಯೋತ್ಪಾದನೆ ಮತ್ತು ಇಸ್ಲಾಂ, ಕೆಡುಕು ಮುಕ್ತ ಸಮಾಜ, ಕರ್ಬಲಾದ ಹುತಾತ್ಮ ಇಮಾಂ ಹುಸೈನ್, ಮುಸ್ಲಿಮರ ಒಗ್ಗಟ್ಟು – ಬಿಕ್ಕಟ್ಟು, ಇಸ್ಲಾಮಿನ ಸಾಮಾಜಿಕ ನಿಯಮಗಳು, ಹದೀಸ್ ನಿಷೇಧಿಗಳ ವಾದ, ಕುರ್ ಆನ್ ಹದೀಸ್ ಪರಿಚಯ, ಮಾನವ ಹಕ್ಕುಗಳು, ಪ್ರವಾದಿ ಯೂಸುಫ್, ಯುವ ಜನಾಂಗದ ಸಮಸ್ಯೆಗಳು ಮತ್ತು ಪರಿಹಾರ, ಖಾದಿಯಾನಿಸಂ, ಪೈಗಂಬರರ ಆಪ್ತ ಸಂಗಾತಿಗಳು, ಪರಲೋಕ ಮತ್ತು ಭಾರತೀಯ ಧರ್ಮಗ್ರಂಥಗಳು, ಪೈಗಂಬರ ವಚನಗಳು, ಆಯತುಲ್ ಕುರ್ಸೀ, ಮೂಸ ಮತ್ತು ಫಿರ್’ಔನ್, ಮಾನವ ಸಮಸ್ಯೆಗಳ ಸುಳಿಯಲ್ಲಿ, ಇಸ್ಲಾಮೀ ಸಂಸ್ಕೃತಿ ಮತ್ತು ನಾಗರೀಕತೆ, ಬಹುಧರ್ಮೀಯ ರಾಷ್ಡ್ರದಲ್ಲಿ ಮುಸ್ಲಿಮರು, ಸತ್ಪಥದ ಸವಾಲುಗಳು, ಧರ್ಮ ಸಂಸ್ಥಾಪನೆಯ ಮಹತ್ವ, 40 ಖುದ್ಸೀ ಹದೀಸ್’ಗಳು… ಹೀಗೆ ಒಟ್ಟು 31 ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ ಅತ್ಯುತ್ತಮ ಅನುವಾದಕರು ಅವರು.


ಅನುವಾದವಲ್ಲದೆ ನಮಾಝ್ ಶಾಫೀ ಕ್ರಮ ಮತ್ತು ಕನ್ನಡ ಕಲಿಯಿರಿ ಇವೆರಡು ಅವರ ಸ್ವರಚಿತ ಕೃತಿಗಳು. ಈ ಎಲ್ಲಾ ಕೃತಿಗಳನ್ನು ಶಾಂತಿ ಪ್ರಕಾಶನವು ಪ್ರಕಟಿಸಿದ್ದು ಲಕ್ಷಾಂತರ ಕನ್ನಡಿಗರಿಗೆ ಅರಿವು ಮತ್ತು ಬೆಳಕು ನೀಡಿದೆ ಮತ್ತು ನೀಡುತ್ತಲೂ ಇದೆ.
1988ರಲ್ಲಿ ಶಾಂತಿ ಪ್ರಕಾಶನ ಆರಂಭವಾದ ನಂತರ ಇಂದಿನವರೆಗೂ ಶಾಂತಿ ಪ್ರಕಾಶನದ ಬೆನ್ನೆಲುಬಾಗಿದ್ದರು ಅವರು. ದಿ.ಇಬ್ರಾಹೀಮ್ ಸಯೀದ್’ರವರ ಜತೆ ಸೇರಿ ಅವರು ಶಾಂತಿ ಪ್ರಕಾಶನ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. 1988ರಿಂದಲೇ ಶಾಂತಿ ಪ್ರಕಾಶನದ ಟ್ರಸ್ಟಿಯಾಗಿದ್ದ ಸಾದುಲ್ಲಾ ಸಾಹೇಬರು ಕಳೆದ 8 ವರ್ಷಗಳಿಂದ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸನ್ಮಾರ್ಗ ವಾರಪತ್ರಿಕೆಯ ಸಂಸ್ಥಾಪಕ ಪ್ರಕಾಶಕರಾಗಿದ್ದ ಅವರು ಯುವ ಬರಹಗಾರರು, ಅನುವಾದಕರಿಗೆ ಉತ್ತಮ ಮಾರ್ಗದರ್ಶಕರು ಮಾತ್ರವಲ್ಲದೆ ಅವರನ್ನು ಸದಾ ಹುರಿದುಂಬಿಸುತ್ತಿದ್ದರು. ನನ್ನ ಪಾಲಿಗೆ ಅವರೋರ್ವ ಅತ್ಯುತ್ತಮ ಸ್ನೇಹಿತ ಮತ್ತು ಶ್ರೇಷ್ಟ ಮಾರ್ಗದರ್ಶಕರಾಗಿದ್ದರು.

- Advertisement -


ಅಲ್ಲಾಹನು ಅವರ ಎಲ್ಲಾ ಸೇವೆಗಳನ್ನು ಅತ್ಯುತ್ತಮ ಸತ್ಕರ್ಮಗಳಾಗಿ ಸ್ವೀಕರಿಸಲಿ.
ಓ ಅಲ್ಲಾಹ್! ಸಾದುಲ್ಲಾ ಸಾಹೇಬರ ಮೇಲೆ ನೀನು ಕರುಣೆ ತೋರು. ಅವರ ಪರಲೋಕ ಜೀವನವನ್ನು ನೀನು ಸುಖಮಯಗೊಳಿಸು. ಅವರಿಗೆ ನಿನ್ನ ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ದಯಪಾಲಿಸು. ಆಮೀನ್ ಯಾ ರಬ್ಬಲ್ ಆಲಮೀನ್…

Join Whatsapp