ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ತಲೆದೋರಿದ್ದು, ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಕಾಂಗ್ರೆಸ್ ಜೊತೆಗಿನ ತಮ್ಮ ಸಂಬಂಧ ಕಡಿದುಕೊಳ್ಳುವ ಸುಳಿವು ನೀಡಿದ್ದಾರೆ.
ಪಕ್ಷದಲ್ಲಿ ತಮಗಾದ ನೋವು, ಅಸಮಾಧಾನವನ್ನು ಬಹಿರಂಗಪಡಿಸಿರುವ ಅವರು ಈ ಬಗ್ಗೆ ಬೆಂಬಲಿಗರನ್ನು ಉದ್ದೇಶಿಸಿ ಪತ್ರ ಬರೆದಿದ್ದು, ಕೆಲವರ ಕುಟಿಲ ರಾಜಕಾರಣದಿಂದ ಆದ ಅನ್ಯಾಯದ ಕುರಿತು ಚರ್ಚಿಸಲು ಹಾಗೂ ಭವಿಷ್ಯದ ಕುರಿತು ನಿರ್ಧರಿಸಲು ಜೂ.24 ರಂದು ಶುಕ್ರವಾರ ಅರಮನೆ ಮೈದಾನದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ.
ಪತ್ರದಲ್ಲಿ, 1984 ರಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ಪ್ರವೇಶಿಸಿದ್ದು, ಕೆಲವರ ವಿರೋಧದ ನಡುವೆಯೂ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೆ, 2022 ರ ಮೇಲ್ಮನೆ ದ್ವೈವಾರ್ಷಿಕ ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷ ಸೂಚಿಸಿತ್ತು. ಆಗ ನನಗೆ ಅವಕಾಶ ತಪ್ಪಿಸಲಾಗಿತ್ತು ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.
ಮೇಲ್ಮನೆ ದ್ವೈವಾರ್ಷಿಕ ಚುನಾವಣೆಗಳಲ್ಲಿ ಅವಕಾಶ ನಿರಾಕರಣೆಯಿಂದ ಬೇಸರಗೊಂಡಿರುವ ಸೀತಾರಾಂ ಬಿಜೆಪಿಯತ್ತ ಚಿತ್ತ ನೆಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.