ದಾವಣಗೆರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮತ್ತೆ ಕಿಡಿಗಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿದವರು ನೀವು. ಯತ್ನಾಳ್ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡಿ ದೊಡ್ಡ ನಾಯಕ ಆಗಬೇಕು ಅಂತ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಕಿಡಿಗಾರಿದ್ದಾರೆ.
ಯತ್ನಾಳ್ ಅವರನ್ನೂ ಜೆಡಿಎಸ್ ಪಕ್ಷದಿಂದ ಕರೆ ತಂದಿದ್ದು ಯಡಿಯೂರಪ್ಪ. ನಿಮ್ಮನ್ನ ಪಕ್ಷಕ್ಕೆ ವಾಪಸ್ ಕರೆತರಲು ಎಲ್ಲರೂ ವಿರೋಧ ಮಾಡಿದ್ದರು. ಆದರೆ, ಪಕ್ಷಕ್ಕೆ ವಾಪಸ್ ಕರೆ ತಂದಿದ್ದು ಯಡಿಯೂರಪ್ಪ. ಕೇಂದ್ರದಲ್ಲಿ ನಿಮ್ಮನ್ನ ಸಚಿವರನ್ನಾಗಿ ಮಾಡಿದ್ದು ಯಡಿಯೂರಪ್ಪ ಎಂದು ಗುಡುಗಿದ್ದಾರೆ.
ಬಿಜೆಪಿ ಕಟ್ಟಲು ಯಡಿಯೂರಪ್ಪ ಅವರ ಕೊಡುಗೆ ಇದೆ. ಪಕ್ಷಕ್ಕಾಗಿ ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ. ಇದೀಗ ಬಿ.ವೈ. ವಿಜಯೇಂದ್ರ ಸಂಘಟನಾ ಚತುರ ಅಂತ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಸುಖಾ ಸುಮ್ಮನೆ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಮಾಡಿಲ್ಲ. ವಿನಾಕಾರಣ ಟೀಕೆ ಮಾಡಿದ್ರೆ ಕಾಂಗ್ರೆಸ್ ಅಸ್ತ್ರ ಆಗುತ್ತೆ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.