ಭುವನೇಶ್ವರ: ಹದಿಮೂರು ದಿನಗಳ ಹಿಂದೆ (ಡಿಸೆಂಬರ್ 14) ಮೇಲ್ಜಾತಿಯ ಗುಂಪೊಂದು ದಲಿತ ವ್ಯಕ್ತಿಯನ್ನು ಹತ್ಯೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವರೆಗೂ ಮೃತನ ಶವಸಂಸ್ಕಾರ ನಡೆಸುವುದಿಲ್ಲ ಕುಟುಂಬ ಪಟ್ಟು ಹಿಡಿದು ಕುಳಿತಿದೆ.
ಮಾತ್ರವಲ್ಲ ಘಟನೆಯನ್ನು ಕುಟುಂಬಸ್ಥರು ವಿರೋಧಿಸಿ ಸತತ 12 ನೇ ದಿನವಾದ ಭಾನುವಾರ ಕೂಡ ಹರ್ಯಾಣದ ಹಿಸ್ಸಾರ್ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಡಿಸೆಂಬರ್ 14 ರಂದು ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಮಿರ್ಕನ್ ಗ್ರಾಮದಲ್ಲಿ 38 ವರ್ಷ ಪ್ರಾಯದ ಕೂಲಿ ಕಾರ್ಮಿಕ ವಿನೋದ್ ಎಂಬಾತನನ್ನು ನೀರಿನ ಮೋಟಾರ್ ಪಂಪನ್ನು ಕದ್ದ ಆರೋಪದಲ್ಲಿ ಥಳಿಸಿ ಹತ್ಯೆಮಾಡಲಾಗಿತ್ತು. ಮಾತ್ರವಲ್ಲ ಮೃತ ವ್ಯಕ್ತಿಯ ಇಬ್ಬರು ಸಂಬಂಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗಾಯಗೊಳಿಸಲಾಗಿತ್ತು.
ಸದ್ಯ ವಿನೋದ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈ ಮಧ್ಯೆ ಕುಟುಂಬದ ಸದಸ್ಯರಿಗೆ 50 ಲಕ್ಷ ರೂಪಾಯಿ ಪರಿಹಾರ, ಪತ್ನಿಗೆ ಸರ್ಕಾರಿ ನೌಕರಿ, ಪ್ರಕರಣದ ಎಲ್ಲಾ ಆರೋಪಿಗಳ ಬಂಧನ, ಗಾಯಗೊಂಡ ಇಬ್ಬರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.