Home ಟಾಪ್ ಸುದ್ದಿಗಳು ಲುಲು ಗ್ರೂಪ್: ತಮಿಳುನಾಡಿನಲ್ಲಿ 3,500 ಕೋಟಿ ರೂ. ಹೂಡಿಕೆಗೆ ಸಿದ್ಧತೆ

ಲುಲು ಗ್ರೂಪ್: ತಮಿಳುನಾಡಿನಲ್ಲಿ 3,500 ಕೋಟಿ ರೂ. ಹೂಡಿಕೆಗೆ ಸಿದ್ಧತೆ

ಅಬುಧಾಬಿ: ಅಬುಧಾಬಿ ಮೂಲದ ಲುಲು ಗ್ರೂಪ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಭಾಗವಾಗಿ ತಮಿಳುನಾಡಿನಲ್ಲಿ 3,500 ಕೋಟಿ ರೂ. ಹೂಡಿಕೆ ನಡೆಸುವುದಾಗಿ ತೀರ್ಮಾನಿಸಿದೆ. ಈ ಬಗ್ಗೆ ಯುಎಇಗೆ ಅಧಿಕೃತ ಭೇಟಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅಬುಧಾಬಿ ಚೇಂಬರ್ ನ ಪ್ರಧಾನ ಕಚೇರಿಯಲ್ಲಿ ಲುಲು ಗ್ರೂಪ್  ಅಧ್ಯಕ್ಷ ಮತ್ತು ಅಬುಧಾಬಿ ಚೇಂಬರ್ ನ ಉಪಾಧ್ಯಕ್ಷ ಎಂ.ಎ. ಯೂಸುಫ್ ಅಲಿಯೊಂದಿಗೆ  ಮಾತುಕತೆ ನಡೆಸಿದರು.

ಶಾಪಿಂಗ್ ಮಾಲ್ ಮತ್ತು ಆಹಾರ ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಲು ತಮಿಳ್ನಾಡು ರಾಜ್ಯ ಸರ್ಕಾರ ಮತ್ತು ಲುಲು ಗ್ರೂಪ್ ಅಂಕಿತ ಹಾಕಿತು. ತಮಿಳುನಾಡು ಪ್ರತಿನಿಧಿಸಿ ಕೈಗಾರಿಕಾ ಅಭಿವೃದ್ಧಿ ಇಲಾಖೆಯ ಪ್ರಮೋಷನ್ ಬ್ಯೂರೋದ ವ್ಯವಸ್ಥಾಪಕ ನಿರ್ದೇಶಕಿ ಪೂಜಾ ಕುಲಕರ್ಣಿ ಮತ್ತು ಲುಲು ಗ್ರೂಪ್ ಪ್ರತಿನಿಧಿಸಿ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎ. ಅಶ್ರಫ್ ಅಲಿ  ಅವರು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಕೈಗಾರಿಕಾ ಸಚಿವ ತಂಗಂ ತೆನ್ನರಶ್, ಎಂ.ಎ. ಯೂಸುಫ್ ಅಲಿ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಹೂಡಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಸಂತೋಷವಾಗಿದೆ.  ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರವು ಹೂಡಿಕೆದಾರರಿಗೆ ಅತ್ಯುತ್ತಮ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ಮಾಲ್ ಗಳು ಮತ್ತು ಹೈಪರ್ಮಾರ್ಕೆಟ್ ಗಳ ಜೊತೆಗೆ, ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲು, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಆಹಾರ ಸಂಸ್ಕರಣಾ ಮತ್ತು ಲಾಜಿಸ್ಟಿಕ್ಸ್ ಕೇಂದ್ರವನ್ನು ಲುಲು ಗ್ರೂಪ್ ಸ್ಥಾಪಿಸಲಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಚರ್ಚೆಗಾಗಿ ಲುಲು ಗ್ರೂಪ್ ನ ಉನ್ನತ ಮಟ್ಟದ ನಿಯೋಗವು ಶೀಘ್ರದಲ್ಲೇ ತಮಿಳುನಾಡಿಗೆ ಭೇಟಿ ನೀಡಲಿದೆ ಎಂದು ಯೂಸುಫ್ ಅಲಿ ಹೇಳಿದರು.

ಕೊಯಂಬತ್ತೂರು, ಸೇಲಂ, ಮಧುರೈ ಮತ್ತು ತಿರುಚಿರಾಪಳ್ಳಿಯಂತಹ ನಗರಗಳಿಗೂ ಲುಲು ತನ್ನ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಲಿದೆ. ತಮಿಳುನಾಡಿನ ಲುಲು ಸಮೂಹದ ಮೊದಲ ಹೈಪರ್ ಮಾರ್ಕೆಟ್ ಈ ವರ್ಷದ ಅಂತ್ಯದ ವೇಳೆಗೆ ಕೊಯಂಬತ್ತೂರಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಯೂಸುಫ್ ಅಲಿ ಹೇಳಿದರು.

ಅಬುಧಾಬಿ ಚೇಂಬರ್ ನಿರ್ದೇಶಕರಾದ ಅಲಿ ಬಿನ್ ಹರ್ಮಲ್ ಅಲ್ ದಹಿರಿ, ಮಸೂದ್ ಅಲ್ ಮಸೂದ್ ಮತ್ತು ಲುಲು ಗ್ರೂಪ್ ಸಿಇಒ ಸೈಫಿ ರೂಪಾವಾಲಾ, ಲುಲು ಗ್ರೂಪ್ ಇಂಡಿಯಾ ಓಮನ್ ನಿರ್ದೇಶಕ ಎ.ವಿ. ಆನಂದ್ ರಾಮ್ ಉಪಸ್ಥಿತರಿದ್ದರು.

ಲುಲು ಗ್ರೂಪ್  ಭಾರತದಲ್ಲಿ ಕೊಚ್ಚಿ, ತಿರುವನಂತಪುರಂ ಮತ್ತು ಬೆಂಗಳೂರಿನಲ್ಲಿ ಮೂರು ಶಾಪಿಂಗ್ ಮಾಲ್ ಗಳನ್ನು ಹೊಂದಿದೆ. ದೇಶದ ನಾಲ್ಕನೇ ಮಾಲ್ ಈ ವರ್ಷದ ಮೇ ಅಂತ್ಯದ ವೇಳೆಗೆ ಲಕ್ನೋದಲ್ಲಿ ತೆರೆಯುವ ನಿರೀಕ್ಷೆಯಿದೆ

Join Whatsapp
Exit mobile version