ಮಧ್ಯಪ್ರದೇಶದಲ್ಲೂ ‘ಲವ್ ಜಿಹಾದ್’ ಕುಖ್ಯಾತಿಯ ಮತಾಂತರ ನಿಷೇಧ ಕಾನೂನಿಗೆ ಕ್ಯಾಬಿನೆಟ್ ಸಮ್ಮತಿ : ಗರಿಷ್ಠ 10 ವರ್ಷ ಜೈಲು, 1 ಲಕ್ಷ ರೂ. ದಂಡ

Prasthutha|

ಭೋಪಾಲ್ : ವಿಧಾನಸಭಾ ಅಧಿವೇಶನಕ್ಕೆ ಮೂರು ದಿನಗಳಿರುವಾಗ, ‘ಲವ್ ಜಿಹಾದ್’ ಕುಖ್ಯಾತಿಯ ‘ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020’ಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಚಿವ ಸಂಪುಟ ಅನುಮತಿ ನೀಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಸ್ತಾಪಿತ ಕಾನೂನಿನಲ್ಲಿ ಧಾರ್ಮಿಕ ಮತಾಂತರಕ್ಕೆ ಯಾರನ್ನಾದರೂ ಬಲವಂತ ಪಡಿಸಿದರೆ, 5 ವರ್ಷ ಜೈಲು ಮತ್ತು 25,000 ರೂ. ದಂಡ ವಿಧಿಸಬಹುದಾದ ಶಿಕ್ಷೆಯನ್ನೊಳಗೊಂಡಿದೆ.

- Advertisement -

ನೂತನ ಕಾನೂನಿನಲ್ಲಿ ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಎಸ್ ಸಿ/ಎಸ್ ಟಿ ಜನರನ್ನು ಮತಾಂತರಕ್ಕೆ ಬಲವಂತಪಡಿಸಿದರೆ, 10 ವರ್ಷ ಜೈಲು, ಗರಿಷ್ಠ 50 ಸಾವಿರ ರೂ. ದಂಡ ವಿಧಿಸಬಹುದಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಸಾಮೂಹಿಕ ಮತಾಂತರ ಮಾಡಿದರೆ 10 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಮಧ್ಯಪ್ರದೇಶದ ಕಾನೂನು ಇಡೀ ದೇಶದಲ್ಲೇ ಅತ್ಯಂತ ಕಠಿಣ ಕಾನೂನು ಆಗಲಿದೆ ಎಂದು ಮಿಶ್ರಾ ಹೇಳಿದ್ದಾರೆ. ಹೊಸ ಕಾನೂನು ಈಗ ಇರುವ ‘ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಅಧಿನಿಯಮ 1968’ರ ಸ್ಥಾನಕ್ಕೆ ಮಾರ್ಪಾಡಾಗಿ ಬರಲಿದೆ.

ಹಿಂದೂ ಮಹಿಳೆಯರನ್ನು ಮುಸ್ಲಿಂ ವ್ಯಕ್ತಿಗಳು ಮದುವೆಯಾಗುವ ಮೂಲಕ ಮತಾಂತರ ಮಾಡಿ, ‘ಲವ್ ಜಿಹಾದ್’ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಇದಕ್ಕೆ ಮುಖ್ಯವಾಹಿನಿ ಮಾಧ್ಯಮಗಳೂ ವಿಷಯಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ಸಾಕಷ್ಟು ಕಟ್ಟುಕತೆಗಳನ್ನು ಹೆಣೆದು ಬಿಜೆಪಿ ಸಿದ್ಧಾಂತ ವ್ಯಾಪಕವಾಗಿ ಹರಡುವುದಕ್ಕೆ ಕೈಜೋಡಿಸಿವೆ.  

- Advertisement -