ಭಾರತ, ಚೀನಾ ಮತ್ತು ರಶ್ಯಾಗಳು ಕೊಳಕು ಗಾಳಿಯನ್ನು ಹೊಂದಿರುವ ರಾಷ್ಟ್ರಗಳೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಅಧ್ಯಕ್ಷೀಯ ಚರ್ಚೆಯ ವೇಳೆ ಪ್ಯಾರಿಸ್ ಒಪ್ಪಂದವನ್ನು ರದ್ದುಗೊಳಿಸಿದ ತನ್ನ ನಿರ್ಣಯವನ್ನು ಸಮರ್ಥಿಸುವುದಕ್ಕಾಗಿ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಕುರಿತು ಜೋ ಬೈಡನ್ ರ ಯೋಜನೆಯನ್ನು ನಿರಾಕರಿಸುವ ಭರದಲ್ಲಿ ಟ್ರಂಪ್ ಹೀಗೆ ಹೇಳಿದ್ದಾರೆ.
“ಚೀನಾವನ್ನು ನೋಡಿ. ಅದೆಷ್ಟು ಕೊಳಕಾಗಿದೆ. ರಶ್ಯಾವನ್ನು ನೋಡಿ. ಅದೆಷ್ಟು ಕೊಳಕಾಗಿದೆ. ಭಾರತವನ್ನು ನೋಡಿ. ಅಲ್ಲಿನ ಗಾಳಿ ಕೊಳಕಾಗಿದೆ. ನಾವು ಟ್ರಿಲಿಯನ್ ಗಟ್ಟಲೆ ಹಣವನ್ನು ಹೊರತೆಗೆಯಬೇಕಾದ ಕಾರಣ ಮತ್ತು ನಮ್ಮನ್ನು ಅತ್ಯಂತ ಅನ್ಯಾಯವಾಗಿ ನಡೆದುಕೊಳ್ಳಲಾದ ಕಾರಣ ನಾವು ಪ್ಯಾರಿಸ್ ಒಪ್ಪಂದದಿಂದ ಹೊರನಡೆದೆವು” ನವೆಂಬರ್ 3 ರಂದು ನಡೆಯಲಿರುವ ಅಮೆರಿಕಾ ಚುನಾವಣೆಗೆ ಮುಂಚಿನ, ದ್ವಿತೀಯ ಹಾಗೂ ಅಂತಿಮ ಚರ್ಚೆಯ ವೇಳೆ ಅವರು ಹೇಳಿದರು.
“ಪ್ಯಾರಿಸ್ ಒಪ್ಪಂದಕ್ಕಾಗಿ ನಾನು ಮಿಲಿಯನ್ ಗಟ್ಟಲೆ ಉದ್ಯೋಗ… ಸಾವಿರಾರು ಕಂಪೆನಿಗಳನ್ನು ಕಳೆದುಕೊಳ್ಳಲಾರೆ. ಅದು ಅನ್ಯಾಯ” ಎಂದು ಅವರು ದೂರದರ್ಶನ ಚರ್ಚೆಯ ವೇಳೆ ನುಡಿದರು.
ಅಮೆರಿಕಾ-ಭಾರತ ಸಂಬಂಧವನ್ನು ಹೆಚ್ಚಿಸುವುದಕ್ಕಾಗಿ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪಿಯ್ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹೊಸದಿಲ್ಲಿಗೆ ಭೇಟಿ ನೀಡುವ ಕೆಲವೇ ದಿನ ಮುಂಚೆ ಟ್ರಂಪ್ ರ ಈ ಹೇಳಿಕೆ ಹೊರಬಿದ್ದಿದೆ.