ಬೆಂಗಳೂರು: ರಾಜ್ಯ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ರಾಜ್ಯದ ಹಲವು ಕಡೆಗಳಲ್ಲಿ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಒಂಭತ್ತು ಜಿಲ್ಲೆಗಳ ಆರ್ ಟಿ ಓ ಚೆಕ್ ಪೋಸ್ಟ್ ಗಳ ಮೇಲೆ ಇಂದು ಮುಂಜಾನೆ 4 ಗಂಟೆಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಅತ್ತಿಬೆಲೆ, ವಿಜಯಪುರದ ಜಳಲಿ ಪೋಸ್ಟ್, ಬೆಳಗಾವಿಯ ನಿಪ್ಪಾಣಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಕೋಲಾರದ ನಂಗ್ಲಿ, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ಗುಂಡ್ಲುಪೇಟೆ, ಬೀದರ್ ನ ಹುಮನಬಾದ್ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ಮಧ್ಯವರ್ತಿಗಳು ಹಾಗೂ ಲಂಚಕ್ಕೆ ಬೇಡಿಕೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸುಮೋಟೋ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ಅತ್ತಿಬೆಲೆ ಆರ್ ಟಿಒ ಕಚೇರಿ ಮೇಲೆ ಮುಂಜಾನೆಯಿಂದ ಎರಡು ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಅತ್ತಿಬೆಲೆ ಆರ್ ಟಿಒ ಕಚೇರಿ ಮೇಲೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಕಚೇರಿ ಒಳಗೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಗುಂಡ್ಲುಪೇಟೆ ಪ್ರವಾಸಿ ಮಂದಿರ ವೃತ್ತದಲ್ಲಿರುವ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದೆ. ಆರ್ ಟಿಒ ಅಧಿಕಾರಿ ಮಹೇಶ್ ಕರ್ತವ್ಯದಲ್ಲಿದ್ದ ವೇಳೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಣ ವಸೂಲಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಬೀದರ್ನ ಹುಮನಾಬಾದ್ನಲ್ಲಿರುವ ಆರ್ಟಿಒ ಚೆಕ್ ಪೋಸ್ಟ್ ಮೇಲೂ ದಾಳಿ ಕಲಬುರಗಿ-ಬೀದರ್ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿಬಂದ ಹಿನ್ನೆಲೆ ಈ ದಾಳಿ ನಡೆದಿದೆ.
ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ 20 ಮಂದಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.