ಹಾಸನ: ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜರ್, ಇಂದಿನಿಂದ ಮೂರು ದಿನಗಳ ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ನಗರದ ಅಧಿದೇವತೆ ಹಾಸನಾಂಬ ಮತ್ತು ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಾಗೂ ದೇಶದಲ್ಲಿ ಮೋದಿ ಜನಪ್ರಿಯತೆ ಹೆಚ್ಚುತ್ತಿದೆ. 2024 ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಇಲ್ಲೂ ಪಕ್ಷವನ್ನು ಬೂತ್ ಮಟ್ಟದಿಂದ ಕಟ್ಟಲಿದ್ದೇವೆ. ಪಕ್ಷ ಬಲವರ್ಧನೆ ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಪ್ರಚಾರ ಮತ್ತು ಫಲಾನುಭವಿಗಳೊಂದಿಗೆ ಮುಖಾಮುಖಿಯಾಗಿ ನೇರ ಸಂವಾದ ಮಾಡುವ ಉದ್ದೇಶದಿಂದ 3 ದಿನಗಳ ಲೋಕಸಭಾ ಪ್ರವಾಸ್ ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳ ಲಾಭ ಎಷ್ಟು ಮಂದಿಗೆ ತಲುಪಿದೆ, ಯಾವ ರೀತಿಯಲ್ಲಿ ಪ್ರಗತಿ ಆಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು. ಫಲಾನುಭವಿಗಳ ಬಳಿ ತೆರಳಿ ಯೋಜನೆಯಿಂದ ಆಗಿರುವ ಪ್ರಯೋಜನದ ಬಗ್ಗೆ ತಿಳಿದು, ಈ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇದರ ಜೊತೆಗೆ ಬಹು ಮುಖ್ಯವಾಗಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಪಕ್ಷಕಟ್ಟಲು ಪಕ್ಷದ ಕಾರ್ಯಕರ್ತರು, ನಾಯಕರು, ಚುನಾಯಿತ ಸದಸ್ಯರ ಜೊತೆ ಚರ್ಚೆ ಮಾಡಿ, ಸಂಘಟನೆ ವಿಚಾರದಲ್ಲಿ ಅವರು ಮಾಡಿರುವ ತಯಾರಿಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ದೊಡ್ಡ ನಾಯಕರು, ನಮ್ಮ ಆದರಣೀಯರು. ಎಲ್ಲಾ ಪಕ್ಷದ ನಾಯಕರಿಗೂ ಒಂದೊಂದು ಕಾಲ ಇರುತ್ತೆ. ಈಗ ಇಡೀ ದೇಶದಲ್ಲಿ ಮೋದಿ ಯುಗ ಇದೆ. ಮೋದಿ ಅವರ ಮೇಲೆ ಜನರಿಗೆ ಇನ್ನೂ ವಿಶ್ವಾಸ ಹೆಚ್ಚಾಗುತ್ತಿದೆ. ಇದಕ್ಕೆ ಹಾಸನ ಕ್ಷೇತ್ರವೂ ಹೊರತಾಗಿಲ್ಲ ಎಂದು ನುಡಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಯವರ ನೇತೃತ್ವದಲ್ಲಿ ಹಾಸನದಲ್ಲೂ ನಮಗೆ ಗೆಲುವು ಸಿಗಲಿದೆ ಎನ್ನುವ ಮೂಲಕ ಪರೋಕ್ಷವಾಗಿ ದೇವೇಗೌಡರ ಯುಗ ಮುಗಿದಿದೆ ಎಂದ ಅವರು, ನಮಗೆ ರಾಜ್ಯ, ದೇಶದ ಎಲ್ಲಾ ಕ್ಷೇತ್ರಗಳೂ ಕೂಡ ಬಹುಮುಖ್ಯ, ಅದರಂತೆ ಹಾಸನ ಕೂಡ ಮೋದಿ ಜೋಳಿಗೆಗೆ ಸೇರಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ನಾಯಕತ್ವವೂ ಇಲ್ಲ, ಆ ಪಕ್ಷವೂ ಉಳಿದಿಲ್ಲ. ಅವರಲ್ಲಿ ನೀತಿ-ನೇತೃತ್ವ ಎರಡೂ ಇಲ್ಲ. ಬಿಜೆಪಿ 8 ವರ್ಷಗಳಲ್ಲಿ ಆರ್ಥಿಕ, ಸಾಂಸ್ಕೃತಿಕವಾಗಿ ಬಲವಾಗಿದೆ. ದೇಶಕ್ಕೆ ವಿವೇಕಾನಂದರು ಜಗತ್ತಿನಲ್ಲಿ ಹೇಗೆ ಗೌರವ ತಂದುಕೊಟ್ಟರೋ ಹಾಗೆಯೇ ಮೋದಿಯವರೂ ಇಂದು ದೇಶದ ಗೌರವ ಹೆಚ್ಚಿಸಿದ್ದಾರೆ ಎಂದು ಕೊಂಡಾಡಿದರು.
8 ವರ್ಷಗಳ ಹಿಂದೆ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು, 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆದು ದೊಡ್ಡ ದೊಡ್ಡ ಸಚಿವರೇ ಜೈಲಿಗೆ ಹೋಗಿದ್ದರು ಎನ್ನುವ ಮೂಲಕ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಕೈ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು. 8 ವರ್ಷಗಳಲ್ಲಿ ನಮ್ಮಲ್ಲಿ ಯಾರೂ ಜೈಲಿಗೆ ಹೋಗಿಲ್ಲ, ಯಾವುದೇ ಅರೋಪ ಕೂಡ ಇಲ್ಲ. ಕೊರೊನಾ ಸಂಕಷ್ಟದ ನಡುವೆಯೂ ದೇಶದ ಆರ್ಥಿಕತೆ ದೃಢವಾಗಿದೆ.ನಮ್ಮ ಆರ್ಥಿಕ ನೀತಿಗಳ ಕಾರಣದಿಂದ ಹಣದುಬ್ಬರ ಕೂಡ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಕಾನೂನು ತನ್ನ ಕೆಲಸ ಮಾಡಲಿದೆ:
ಕಾಂಗ್ರೆಸ್ ನಾಯಕರ ವಿರುದ್ದ ಸಿಬಿಐ,ಇಡಿ, ಐಟಿ ದುರ್ಬಳಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾನೂನು ಯಾವತ್ತೂ ತನ್ನ ಕೆಲಸ ಮಾಡಲಿದೆ. ಅವರು ಸರಿಯಾಗಿದ್ದರೆ, ಭ್ರಷ್ಟಾಚಾರ ಮಾಡಿಲ್ಲ ಎಂದಾದರೆ ಹೆದರೋದು ಏಕೆ? ಮೋದಿಯವರು ಸಿಎಂ ಇದ್ದಾಗ ಸಿಬಿಐ ನವರು 10 ರಿಂದ 12 ಗಂಟೆ ತನಿಖೆ ಮಾಡಿದ್ರು. ಒಬ್ಬರೇ ಹೋಗಿ ಪ್ರಶ್ನೆಗಳಿಗೆ ಉತ್ತರ ಕೊಟ್ಟು ತನಿಖೆ ಎದುರಿಸಿದ್ರು. ಜನರನ್ನು ತಮ್ಮೊಟ್ಟಿಗೆ ಕರೆದೊಯ್ಯಲಿಲ್ಲ, ಪಕ್ಷವೂ ಪ್ರತಿಭಟನೆ ಮಾಡಲಿಲ್ಲ. ತನಿಖೆ ಹೆಸರಿನಲ್ಲಿ ಮೋದಿ ಅವರಿಗೆ ತೊಂದರೆ ಕೊಟ್ಟರು. ಈಗ ಆರೋಪ ಮುಕ್ತರಾಗಿದ್ದಾರೆ. ರಾಹುಲ್, ಸೋನಿಯಾಗೆ ಭಯ ಏಕೆ, ತಪ್ಪು ಮಾಡಿಲ್ಲ ಎಂದರೆ ತನಿಖೆ ಎದುರಿಸಲಿ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಪ್ರೀತಂಗೌಡ, ಬೆಳ್ಳಿ ಪ್ರಕಾಶ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜು, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ನಗರಸಭೆ ಅಧ್ಯಕ್ಷ ಮೋಹನ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಸಚ್ಚಿದಾನಂದ ಮೂರ್ತಿ ಮೊದಲಾದವರಿದ್ದರು.