Home ಟಾಪ್ ಸುದ್ದಿಗಳು ಲೋಕಸಭೆ ಚುನಾವಣೆಯು ದೇಶದಲ್ಲಿ ಕೋಮು ರಾಜಕೀಯಕ್ಕೆ ಅಂತ್ಯ ಹಾಡಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯು ದೇಶದಲ್ಲಿ ಕೋಮು ರಾಜಕೀಯಕ್ಕೆ ಅಂತ್ಯ ಹಾಡಿದೆ: ಅಖಿಲೇಶ್ ಯಾದವ್

ನವದೆಹಲಿ: ‘2024ರ ಲೋಕಸಭೆ ಚುನಾವಣೆಯು ದೇಶದಲ್ಲಿ ಕೋಮು ರಾಜಕೀಯಕ್ಕೆ ಅಂತ್ಯ ಹಾಡಿದೆ. ಈ ಚುನಾವಣಾ ಫಲಿತಾಂಶ ಇಂಡಿಯಾ ಮೈತ್ರಿಕೂಟದ ನೈತಿಕ ವಿಜಯವಾಗಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.


ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಅವರು, ‘ಚುನಾವಣಾ ಫಲಿತಾಂಶ ಪ್ರಕಟವಾದ ಜೂನ್ 4 ಭಾರತಕ್ಕೆ ಕೋಮು ರಾಜಕೀಯದಿಂದ ಮುಕ್ತಿ ಸಿಕ್ಕ ದಿನವಾಗಿದೆ. ದೇಶದಲ್ಲಿ ಕೋಮು ರಾಜಕೀಯವೂ ಶಾಶ್ವತವಾಗಿ ಅಂತ್ಯ ಕಂಡಿದೆ. ರಾಮಮಂದಿರ ನಿರ್ಮಾಣವಾಗಿರುವ ಅಯೋಧ್ಯೆಯ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿರುವುದು ಮತದಾರರ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಬಿಜೆಪಿಯ ಸೋಲು ಶ್ರೀರಾಮನ ಆಶಯವೂ ಆಗಿರಬಹುದು’ ಎಂದು ಹೇಳಿದ್ದಾರೆ.


ನೀಟ್ ಪರೀಕ್ಷೆಗಳ ಅಕ್ರಮಗಳ ಬಗ್ಗೆ ಕಿಡಿಕಾರಿದ ಅವರು, ‘ಶಿಕ್ಷಣ ಮಾಫಿಯಾ ಹುಟ್ಟಿರುವುದೇ ಈ ಸರ್ಕಾರದ ಕಳೆದ ಹತ್ತು ವರ್ಷಗಳ ಸಾಧನೆಯಾಗಿದೆ. ದೇಶದ ಅತಿ ದೊಡ್ಡ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೂಡ ಸೋರಿಕೆಯಾಗಿದೆ. ಯುವಕರಿಗೆ ಉದ್ಯೋಗ ನೀಡಬಾರದು ಎಂಬ ಕಾರಣಕ್ಕೆ ಸರ್ಕಾರ ಇಂತಹ ಕೆಲಸಗಳನ್ನು ಮುಂದುವರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ನಿನ್ನೆ ದಿನ ಇವಿಎಂಗಳ ಬಗ್ಗೆ ನನಗೆ ನಂಬಿಕೆ ಇರಲಿಲ್ಲ. ಇಂದು ಕೂಡ ಇಲ್ಲ. ಉತ್ತರ ಪ್ರದೇಶದಲ್ಲಿ ನಾವು ಎಲ್ಲಾ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಇವಿಎಂ ಅನ್ನು ನಾನು ನಂಬುವುದಿಲ್ಲ. ಇವಿಎಂಗಳ ಸಮಸ್ಯೆಗಳು ಇನ್ನು ಜೀವಂತವಾಗಿವೆ’ ಎಂದು ಹೇಳಿದ್ದಾರೆ.

Join Whatsapp
Exit mobile version