ನಾಳೆಯಿಂದ ಒಂದು ವಾರ ಲಾಕ್‌ಡೌನ್ ಘೋಷಿಸಿದ ಹರಿಯಾಣ ಸರ್ಕಾರ

Prasthutha|

ಚಂಡೀಗಡ: ಕೊರೊನಾ ಪ್ರಕರಣಗಳ ತೀವ್ರ ಏರಿಕೆಯ ಮಧ್ಯೆ, ಹರಿಯಾಣ ಸರ್ಕಾರ ಮೇ ಮೂರರಿಂದ ಒಂದು ವಾರದವರೆಗೆ ಲಾಕ್ ಡೌನ್ ಘೋಷಿಸಿದೆ.

ಇದಕ್ಕೂ ಮೊದಲು ಗುರುಗ್ರಾಮ್, ಫರಿದಾಬಾದ್, ಪಂಚಕುಲ, ಸೋನಿಪತ್, ರೋಹ್ಟಕ್, ಕರ್ನಾಲ್, ಹಿಸಾರ್, ಸಿರ್ಸಾ ಮತ್ತು ಫತೇಬಾದ್ – ಒಂಬತ್ತು ಜಿಲ್ಲೆಗಳಲ್ಲಿ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿತ್ತು.

- Advertisement -

‘ಮೇ 3 ರಿಂದ ಇಡೀ ರಾಜ್ಯದಲ್ಲಿ 7 ದಿನಗಳ ಲಾಕ್ ಡೌನ್ ಇರುತ್ತದೆ’ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಹರಿಯಾಣದಲ್ಲಿ ಶನಿವಾರ 125 ಕೋವಿಡ್ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 4,341ಕ್ಕೆ ತಲುಪಿದೆ. 13,588 ಹೊಸ ಸೋಂಕಿತರು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,01,566 ಕ್ಕೇರಿದೆ.

ಕೋವಿಡ್-19 ಪ್ರಕರಣಗಳ ಏರಿಕೆಯಿಂದ, ಹರಿಯಾಣದ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳ ಮೇಲೆ ಸಾಕಷ್ಟು ಒತ್ತಡವಿದೆ. ವೈದ್ಯಕೀಯ ಆಮ್ಲಜನಕ ಸರಬರಾಜು ಮತ್ತು ಹೆಚ್ಚುತ್ತಿರುವ ಹಾಸಿಗೆಗಳ ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರಕ್ಕೆ ಸಮಯದ ಅಗತ್ಯವಿದೆ.

ಪ್ರತಿಪಕ್ಷ ನಾಯಕರು ರಾಜ್ಯದ ಕೋವಿಡ್ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗುರುವಾರ ಸರ್ಕಾರವನ್ನು ಕೋರಿದ್ದು, ಸರಕಾರದ ಸಂಪೂರ್ಣ ಗಮನ ಹರಿಯಾಣದ ಜನರನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸುವತ್ತ ಇರಬೇಕು ಎಂದಿದ್ದಾರೆ.

ಐಎನ್‌ಎಲ್‌ಡಿ ಹಿರಿಯ ಮುಖಂಡ ಅಭಯ್ ಸಿಂಗ್ ಚೌತಾಲಾ, ಕೋವಿಡ್ -19 ನಿರ್ವಹಣೆಗೆ ಸಂಬಂಧಿಸಿದಂತೆ ಜೆಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು, ರಾಜ್ಯದ ಪರಿಸ್ಥಿತಿ ದೆಹಲಿಗಿಂತ ಕೆಟ್ಟದಾಗಿದೆ ಎಂದಿದ್ದಾರೆ.

‘ಹರಿಯಾಣದ ಪರಿಸ್ಥಿತಿ ದೆಹಲಿಗಿಂತ ಕೆಟ್ಟದಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲ, ಆಮ್ಲಜನಕದ ಕೊರತೆಯಿದೆ. ಈ ಸರ್ಕಾರಕ್ಕೆ ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ’ ಎಂದು ಇತ್ತೀಚೆಗೆ ಅವರು ಹೇಳಿದ್ದರು.

- Advertisement -