Home ಟಾಪ್ ಸುದ್ದಿಗಳು ಲಾಕ್ ಡೌನ್ ನಿಂದ ಪ್ರವಾಸೋದ್ಯಮಕ್ಕೆ 25 ಸಾವಿರ ಕೋಟಿ ರೂ.ನಷ್ಟ: ಸಚಿವ ಆನಂದ ಸಿಂಗ್

ಲಾಕ್ ಡೌನ್ ನಿಂದ ಪ್ರವಾಸೋದ್ಯಮಕ್ಕೆ 25 ಸಾವಿರ ಕೋಟಿ ರೂ.ನಷ್ಟ: ಸಚಿವ ಆನಂದ ಸಿಂಗ್

ಬೆಂಗಳೂರು: ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಯಿತು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕಾಪು ಸಿದ್ದಲಿಂಗ ಸ್ವಾಮಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಕೆಎಸ್ ಟಿಡಿಸಿ ಅಧಿಕಾರಿಗಳು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಆನಂದ್ ಸಿಂಗ್, ಕೋವಿಡ್ 19ರಿಂದಾಗಿ ವಿಶ್ವದಾದ್ಯಂತ ತೀವ್ರ ಹೊಡೆತ ಮತ್ತು ನಷ್ಟ ಅನುಭವಿಸಿದ ಕ್ಷೇತ್ರ ಪ್ರವಾಸೋದ್ಯಮ ವಲಯ. ಕಳೆದ 2 ವರ್ಷಗಳಿಂದ ನಮ್ಮ ಪ್ರವಾಸೋದ್ಯಮಕ್ಕೆ ಕೋವಿಡ್ ಪಿಡುಗಿನಿಂದಾಗಿ ಆಗಿರುವ ತೊಂದರೆ ಅತೀ ಹೆಚ್ಚು. ಇದರ ಪ್ರಭಾವ ನಮ್ಮ ರಾಜ್ಯದ ಮೇಲು ಕೂಡ ಆಗಿದೆ ಎಂದರು.
ಪ್ರವಾಸೋದ್ಯಮದ ಜೊತೆ ನಿಕಟ ಸಂಪರ್ಕ ಹೊಂದಿರುವ ಆತಿಥ್ಯ ವಲಯವು ಮಾರ್ಚ್ 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿ ನಿಂದ ಸುಮಾರು ರೂ.25,000 ಕೋಟಿ ನಷ್ಟವನ್ನು ಅನುಭವಿಸಿದ್ದು, ಶಿಕ್ಷಣದ ನಂತರ ಹೆಚ್ಚಿನ ಜನರಿಗೆ ರಾಜ್ಯದಲ್ಲಿ ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಈ ಬಿಕ್ಕಟ್ಟಿನಿಂದ ಬಳಲುತ್ತಿರುವ ಆತಿಥ್ಯ ವಲಯವು ಪುನರುಜ್ಜೀವನದ ಹಂತವನ್ನು ತಲುಪಲು ಇನ್ನೂ ಎರಡು ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
8 ನೇ ಜೂನ್ 2020 ರಂದು ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರೀಕ್ಷೆಯಲ್ಲಿದ್ದ ಪ್ರವಾಸಿಗರಿಗೆ ಹಾಗೂ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗಾಗಿ ಕೋವಿಡ್ -19 ಪೂರ್ವಸಿದ್ಧತಾ ಪ್ರೋಟೋಕಾಲ್ ಗಳನ್ನು ಬಿಡುಗಡೆ ಮಾಡಿದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂಬುದು ಹೆಗ್ಗಳಿಕೆಯ ವಿಷಯವಾಗಿದೆ.ನಮ್ಮ ಇಲಾಖೆಯು ಉದ್ಯಮ ಸಂಘಗಳು, ಭಾಗಿದಾರರು ಮತ್ತು ಸೇವಾ ಪೂರೈಕೆದಾರರು ಮತ್ತು ಜಾಗತಿಕ ಅಧಿಕಾರಿಗಳೊಂದಿಗೆ ಅನೇಕ ಸುತ್ತಿನ ಚರ್ಚೆಗಳನ್ನು ನಡೆಸಿ ನೈರ್ಮಲ್ಯ ಮತ್ತು ಸುರಕ್ಷತೆಗಾಗಿ ಸಮಗ್ರ ಪ್ರೋಟೋಕಾಲ್ ಗಳನ್ನು ರಚಿಸಿದ್ದು, ಪ್ರವಾಸಿಗರು, ವಸತಿ ಘಟಕಗಳು ಅಂದರೆ ಹೋಟೆಲ್ ಗಳು, ಪ್ರವಾಸಿ ತಾಣಗಳು ಮತ್ತು ಪ್ರವಾಸೋದ್ಯಮ ಸಾರಿಗೆಗಾಗಿ ಪ್ರತ್ಯೇಕ ಪ್ರೋಟೋಕಾಲ್ಗಳನ್ನು ನೀಡಿದೆ ಎಂದರು.
ಇಂದು ನಾವು ಕವಲು ದಾರಿಯಲ್ಲಿದ್ದರೂ, ನಾವು ಆಶಾದಾಯಕವಾಗಿದ್ದೇವೆ. ದೇಶದಲ್ಲಿಯೇ ನಮ್ಮ ರಾಜ್ಯವು ಉದ್ಯಮಿ ಸ್ನೇಹಿ ಮತ್ತು ಪ್ರವಾಸಿ ಸ್ನೇಹಿ ರಾಜ್ಯ. ಪ್ರವಾಸೋದ್ಯಮ ವಲಯದ ಭಾಗಿದಾರರ ರಕ್ಷಣೆಗೆ ಮತ್ತು ಹಿತ ಕಾಯಲು ಸರ್ಕಾರವು ಕಟಿಬದ್ದವಾಗಿದ್ದು, ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪುನರುಜ್ಜೀವನಕ್ಕಾಗಿ ನಮ್ಮ ಸರ್ಕಾರವು ಈ ಕೆಳಕಂಡ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಎ) ವಿದ್ಯುತ್ ದರ ಮತ್ತು ಆಸ್ತಿ ತೆರಿಗೆಯನ್ನು 5 ವರ್ಷಗಳ ಅವಧಿಗೆ ಕೈಗಾರಿಕಾ ದರದಲ್ಲಿ ಸ್ಟಾರ್ ವರ್ಗೀಕೃತ ಹೋಟೆಲ್ಗಳು ಪಾವತಿಸುವುದು.
ಬಿ) 2020-21ರ ಹಣಕಾಸು ವರ್ಷದಲ್ಲಿ ಹೋಟೆಲ್ಗಳು, ರೆಸಾರ್ಟ್ಗಳು, ರೆಸ್ಟೋರೆಂಟ್ ಗಳು ಮತ್ತು ಮನೋರಂಜನಾ ಪಾರ್ಕ್ ಗಳ ಆಸ್ತಿ ತೆರಿಗೆಯಲ್ಲಿ 50% ಕಡಿತ.
ಸಿ) ಹೋಟೆಲ್ಗಳು, ರೆಸಾರ್ಟ್ಗಳು, ರೆಸ್ಟೋರೆಂಟ್ಗಳು ಮತ್ತು ಮನೋರಂಜನಾ ಪಾರ್ಕ್ ಗಳಿಗೆ ಏಪ್ರಿಲ್ -ಜೂನ್ 2021 ರ ಅವಧಿಯ ವಿದ್ಯುತ್ ಬಿಲ್ ನ ಡಿಮ್ಯಾಂಡ್ ಶುಲ್ಕ ಮನ್ನಾ,
ಡಿ) ಅಬಕಾರಿ ಪರವಾನಗಿ ಶುಲ್ಕದಲ್ಲಿ ಮನ್ನಾ, ಇದರಲ್ಲಿ ಕೇವಲ 50% ಅಬಕಾರಿ ಪರವಾನಗಿ ಶುಲ್ಕ ಮತ್ತು ಹೆಚ್ಚುವರಿ ಪರವಾನಗಿ ಶುಲ್ಕವನ್ನು ಹೋಟೆಲ್ ಗಳು, ರೆಸಾರ್ಟ್ಗಳು, ರೆಸ್ಟೋರೆಂಟ್ ಗಳು ಮತ್ತು ಮನೋರಂಜನಾ ಪಾರ್ಕ್ ಗಳು ಪಾವತಿಸಬೇಕಾಗುತ್ತದೆ. ಉಳಿದ ಶುಲ್ಕವನ್ನು 31 ನೇ ಡಿಸೆಂಬರ್ 2021 ರೊಳಗೆ ಪಾವತಿಸಬೇಕು.
ಇ) ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಲಾದ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ ರೂ.5,000 ಗಳ ಸಹಾಯ ಧನ ವಿತರಣೆ. ಇಲ್ಲಿಯವರೆಗೂ 364 ಪ್ರವಾಸಿ ಮಾರ್ಗದರ್ಶಿಗಳಿಗೆ ಒಟ್ಟು ರೂ 18.20 ಲಕ್ಷ ವಿತರಣೆ ಮಾಡಲಾಗಿದೆ. ಇಂದು 3 ಪ್ರವಾಸಿ ಮಾರ್ಗದರ್ಶಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಗಿದೆ.ಹಾಗಯೇ, ಪ್ರತಿ ಪ್ರವಾಸಿ ಮಾರ್ಗದರ್ಶಿಗೆ ನಮ್ಮ ಇಲಾಖೆ ವತಿಯಿಂದ ಜಾಕೆಟ್ ವಿತರಣೆ ಮಾಡಲಾಗುತ್ತದೆ.
ಪ್ರವಾಸೋದ್ಯಮ ವಲಯವು ನಿಮಗೆ ತಿಳಿದಿರುವಂತೆ, ಆರ್ಥಿಕತೆಯ ಪ್ರಮುಖ ಎಂಜಿನ್ ಮತ್ತು ಉದ್ಯೋಗಗಳು ಮತ್ತು ಆದಾಯವನ್ನು ಸೃಷ್ಟಿಸುವ ಅಪಾರ ಸಾಮರ್ಥ್ಯವನ್ನು ಹೊಂದಿರುವ ಕ್ಷೇತ್ರ. ಕರ್ನಾಟಕದಲ್ಲಿ, ಕೋವಿಡ್-19 ರ ಮೊದಲು ಪ್ರವಾಸೋದ್ಯಮ ಜಿಡಿಪಿಯು ರಾಜ್ಯದ 14.8% ರಷ್ಟಿತ್ತು ಮತ್ತು ಸುಮಾರು 30 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗವನ್ನು ನೀಡಿತ್ತು.
ಹಾಗಾಗಿ, ನಮ್ಮ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದ ಅಪಾರ ಸಾಮರ್ಥ್ಯವನ್ನು ಗುರುತಿಸುತ್ತದೆ. ಈ ನಿಟ್ಟಿನಲ್ಲಿ, ಇಲಾಖೆಯು ಕರ್ನಾಟಕ ಪ್ರವಾಸೋದ್ಯಮಕ್ಕಾಗಿ ವಿಷನ್ 2025 ಅನ್ನು ಸಿದ್ಧಪಡಿಸಿದೆ. ವಿಷನ್ 2025 ರ ಅಡಿಯಲ್ಲಿ, ರಾಜ್ಯದ ಜಿಡಿಪಿಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆ 2025 ರ ವೇಳೆಗೆ 20% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. 2025 ರ ವೇಳೆಗೆ, ಕರ್ನಾಟಕವು ದೇಶೀಯ ಪ್ರವಾಸಿ ಭೇಟಿಗಳಿಗಾಗಿ ಭಾರತದ ಅಗ್ರ ಎರಡು ರಾಜ್ಯಗಳಲ್ಲಿ ಮತ್ತು ವಿದೇಶಕ್ಕೆ ಅಗ್ರ ಹತ್ತು ರಾಜ್ಯಗಳಲ್ಲಿ ಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ.

ಈ ಉದ್ದೇಶವನ್ನು ಸಾಧಿಸಲು, ಪ್ರವಾಸೋದ್ಯಮ ಇಲಾಖೆಯು ಹೊಸ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು 2020-26 ಬಿಡುಗಡೆ ಮಾಡಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ರ ಅಡಿಯಲ್ಲಿ ಪ್ರೋತ್ಸಾಹಧನ, ಸಹಾಯಧನ ಮತ್ತು ರಿಯಾಯಿತಿಗಳಿಗಾಗಿ ಕರ್ನಾಟಕ ಸರ್ಕಾರವು ಒಟ್ಟು ರೂ.500 ಕೋಟಿಗಳನ್ನು ಕಾಯ್ದಿರಿಸಿದೆ.
ಈ ನೀತಿಯು 2026 ರ ವೇಳೆಗೆ 5,000 ಕೋಟಿ ರೂಪಾಯಿಗಳಷ್ಟು ಹೂಡಿಕೆಗಳನ್ನು ಮತ್ತು 1 ಮಿಲಿಯನ್ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದ್ದು, 1700+ ಪ್ರವಾಸೋದ್ಯಮ ಯೋಜನೆಗಳು ಮತ್ತು ಸೇವೆಗಳ ಇದರ ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ಈ ಅಂಶಗಳ ಮೇಲೆ ಕೇಂದ್ರೀಕರಿಸಿ ಪ್ರವಾಸೋದ್ಯಮ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೆ ಎಲ್ ಆರ್ ಅಧ್ಯಕ್ಷ ಅಪ್ಪಣ್ಣ,.ಕೆ ಎಸ್ ಟಿ ಡಿ ಸಿ ಅಧ್ಯಕ್ಷ ಕಾ ಪು ಸಿದ್ದಲಿಂಗಸ್ವಾಮಿ, ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೇ, ಕರ್ನಾಟಕ ರಾಜ್ಯ ಸರ್ಕಲ್ ನ ಮುಖ್ಯಸ್ಥರಾದ ಶಾರದಾ ಸಂಪತ್, ಕೆ ಟಿ ಎಸ್ ನ ಅಧ್ಯಕ್ಷ ಶಾಮರಾಜು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸಿಂಧು ಬಿ ರೂಪೇಶ್ , ಜೆ ಎಲ್ ಆರ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ , ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ & ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Join Whatsapp
Exit mobile version