Home ಟಾಪ್ ಸುದ್ದಿಗಳು ಕೋವಿಡ್ ಭೀತಿಯಿಂದ ಶವ ಸಂಸ್ಕಾರಕ್ಕೆ ಗ್ರಾಮಸ್ಥರಿಂದ ಅಡ್ಡಿ | ಬೈಕಿನಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ ನಡೆಸಿದ...

ಕೋವಿಡ್ ಭೀತಿಯಿಂದ ಶವ ಸಂಸ್ಕಾರಕ್ಕೆ ಗ್ರಾಮಸ್ಥರಿಂದ ಅಡ್ಡಿ | ಬೈಕಿನಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ ನಡೆಸಿದ PFI

►ಮೃತರ ಜಮೀನಿನಲ್ಲೂ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದ ಕೊಳ್ಳೇಗಾಲದ ಜನತೆ

ಚಾಮರಾಜನಗರ : ಕೋವಿಡ್  ಬಾಧಿತರಾಗಿ ಮೃತರಾದ ಶವಗಳನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸುತ್ತಾ ಬಂದಿರುವ ಪಿಎಫ್ಐ ಸಂಘಟನೆ ಮತ್ತೊಮ್ಮೆ ಮಾನವೀಯತೆ ಕಾರ್ಯದೊಂದಿಗೆ ಸುದ್ದಿಯಾಗಿದೆ. ಇದೀಗ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಮೃತ ವೃದ್ಧರೋರ್ವರ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ. ಕೋವಿಡ್ ಗೆ ಹೆದರಿ ಊರವರು ಮೃತದೇಹದ ಹತ್ತಿರ ಸುಳಿಯಲು ಭಯಪಟ್ಟಿದ್ದು, ಮೃತರ ಸ್ವಂತ ಜಮೀನಿದ್ದರೂ ಅಲ್ಲೂ ಶವಸಂಸ್ಕಾರ ಮಾಡಲು ಅಡ್ಡಿಪಡಿಸಿದ್ದರು. ಕೊನೆಗೆ ಪಿಎಫೈ ಕಾರ್ಯಕರ್ತರು ಶವವನ್ನು ಬೈಕಿನಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಆಲದಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಕುಟುಂಬಸ್ಥರಿಲ್ಲದ ಮಾದೇವ ಎಂಬವರು ತನ್ನ ನಿವಾಸದಲ್ಲೇ ಮೃತಪಟ್ಟಿದ್ದು, ಕೋವಿಡ್ ಬಾಧಿತರಾಗಿ ಸಾವನ್ನಪ್ಪಿದ್ದಾರೆಂದು ಶಂಕಿಸಿ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು  ಮುಂದೆ ಬಂದಿರಲಿಲ್ಲ. ಮೃತ ವ್ಯಕ್ತಿಗೆ ಕೊರೋನಾ ಪರೀಕ್ಷೆ ನಡೆಸದೆಯೇ ಸೋಂಕು ತಗುಲಿರಬಹುದು ಎಂದು ಗ್ರಾಮಸ್ಥರೆಲ್ಲರೂ ನಿರ್ಧರಿಸಿ ಶವ ಸಂಸ್ಕಾರದ ಕಾರ್ಯಕ್ಕೆ ಸಹಾಯ ಮಾಡಿಲ್ಲ ಎಂದು ತಿಳಿದುಬಂದಿದೆ.

 ನಂತರ ಮಾಹಿತಿಯನ್ನರಿತ ಚಾಮರಾಜನಗರದ  ಪಿಎಫ್ಐ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರಕ್ಕೆ ಮುಂದಾದ ಸಂದರ್ಭದಲ್ಲಿ ಅಂತ್ಯಕ್ರಿಯೆಗೆ ಯಾವೊಬ್ಬರೂ ಜಾಗ ನೀಡದೆ, ನಮ್ಮ ಊರಿನಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾಲೂಕು ಆಡಳಿತದಿಂದ ನೆರವು ದೊರೆಯದೆ ಶವ ಶಾಗಿಸಲು ಯಾರೂ ವಾಹನವನ್ನೂ ನೀಡದೆ ಅಮಾನವೀಯತೆ ತೋರಿದ್ದಾರೆ ಎನ್ನಲಾಗಿದೆ.

 ಎಲ್ಲೂ ವಾಹನ ಸಿಗದ ಹಿನ್ನಲೆಯಲ್ಲಿ ಪಿಎಪ್ಐ ಕಾರ್ಯಕರ್ತರು ಆಗಮಿಸಿದ್ದ ದ್ವಿಚಕ್ರ ವಾಹನದಲ್ಲೇ ಏಣಿಯನ್ನು ಕಟ್ಟಿ ಶವ ಸಾಗಿಸಿದ್ದು, ಮಾಹಿತಿ ತಿಳಿದ ಗ್ರಾಮಾಂತರ ಠಾಣೆಯ ಪೋಲಿಸರು ಸ್ಥಳಕ್ಕೆ ಆಗಮಿಸಿ ಗೋಮಾಲದಲ್ಲಿ ಅಂತ್ಯಕ್ರಿಯೆ ನಡೆಸಲು ಜಾಗ ನೀಡಿದ ಬಳಿಕ ಪಿಎಫ್ ಐ ಕೊಳ್ಳೆಗಾಲ ಸಮಿತಿಯು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಿಕೊಟ್ಟಿದೆ.

Join Whatsapp
Exit mobile version