ನವದೆಹಲಿ: ಪ್ರಮುಖ ಆನ್ ಲೈನ್ ಶಿಕ್ಷಣ ಸಂಸ್ಥೆ ಬೈಜುಸ್ ತನ್ನ ಸಾಮಾಜಿಕ ಕಳಕಳಿಯ ವಿಭಾಗವಾದ “ಎಲ್ಲರಿಗೂ ಶಿಕ್ಷಣ” (ಎಜುಕೇಷನ್ ಫಾರ್ ಆಲ್)ದ ಮೊದಲ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು ನೇಮಿಸಿಕೊಂಡಿದೆ ಎಂದು ಘೋಷಿಸಿದೆ.
ಪ್ರಸ್ತುತ ಲೀಗ್ 1 ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ ಪರ ಆಡುತ್ತಿರುವ ಮತ್ತು ಅರ್ಜೆಂಟೀನಾದ ಫುಟ್ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣದ ಉದ್ದೇಶವನ್ನು ಉತ್ತೇಜಿಸಲು ಬೈಜುಸ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬೈಜುಸ್ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮ ಜಾಗತಿಕ ರಾಯಭಾರಿಯಾಗಿ ಲಿಯೊನೆಲ್ ಮೆಸ್ಸಿ ಅವರೊಂದಿಗೆ ಸಹಿ ಹಾಕಲು ನಮಗೆ ಗೌರವದ ವಿಚಾರವಾಗಿದ್ದು, ಆ ನಿಟ್ಟಿನಲ್ಲಿ ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಅತ್ಯಂತ ಯಶಸ್ವಿ ಕ್ರೀಡಾ ಪಟುಗಳಲ್ಲಿ ಒಬ್ಬರಾಗಿದ್ದಾರೆ.ಬೈಜುಸ್ ಎಜುಕೇಷನ್ ಫಾರ್ ಆಲ್ (ಇಎಫ್ಎ) ಪ್ರಸ್ತುತ ತಾನು ಸಬಲೀಕರಣಗೊಳಿಸುತ್ತಿರುವ ಸುಮಾರು 5.5 ಮಿಲಿಯನ್ ಮಕ್ಕಳಿಗೆ ಈ ರೀತಿಯ ಅವಕಾಶವನ್ನು ಸೃಷ್ಟಿಸಲು ಬಯಸುತ್ತದೆ ಎಂದು ಬೈಜುಸ್ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.
ಕತಾರ್ ನಲ್ಲಿ ನಡೆಯಲಿರುವ ಮುಂಬರುವ ಫಿಫಾ ವಿಶ್ವಕಪ್ 2022 ರ ಅಧಿಕೃತ ಪ್ರಾಯೋಜಕತ್ವವನ್ನು ಬೈಜುಸ್ ಪಡೆದುಕೊಂಡಿದೆ.