ಬೆಂಗಳೂರು : ದೇಶದ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಸಮುದಾಯ ಮತ್ತು ಮಠಗಳ ಕೊಡುಗೆ ಅಪಾರ ಎಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಸಚಿವರಾದ ಬಳಿಕ ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಅವರು, ಸನ್ಮಾನ ಸ್ವೀಕರಿಸಿ ಮಾತನಾಡಿ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಮತ್ತು ಮಠಾಧೀಶರು ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಅನ್ನ, ಜ್ಞಾನವನ್ನು ನೀಡಿದ್ದಾರೆ ಎಂದರು.
ಜಗತ್ತಿಗೆ ಸಾಮಾಜಿಕ ನ್ಯಾಯ ನೀಡಿದ್ದು ವೀರಶೈವ ಲಿಂಗಾಯಿತ ಸಮುದಾಯ. ಇಂತಹ ಸಮಾಜದಲ್ಲಿ ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಹಿಂದುಳಿದ ಅನೇಕ ಜನರಿದ್ದಾರೆ ಅವರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಮೀಸಲಾತಿ ದೊರಕಬೇಕು ಇದಕ್ಕಾಗಿ ಮಹಾಸಭಾ ಶ್ರಮಿಸುತ್ತಿದೆ ಎಂದರು.
ಕೇಂದ್ರ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರಿಗೆ ಮೀಸಲು ಕಲ್ಪಿಸಬೇಕು ಎಂದು ಮಹಾಸಭಾ ಹಿಂದಿನಿಂದಲೂ ಆಗ್ರಹಿಸುತ್ತಿದೆ, ಇದಕ್ಕೆ ನಿರಂತರ ಪ್ರಯತ್ನ ಮಾಡಲಾಗುವುದು ಎಂದರು.
ಸಮಾಜದ ಎಲ್ಲಾ ಒಳಪಂಗಡಗಳನ್ನು ಮತ್ತು ಸರ್ವರನ್ನೂ ಒಗ್ಗೂಡಿಸಿ ಸಮಾಜದಲ್ಲಿ ಒಟ್ಟಾಗಿ ತೆಗೆದುಕೊಂಡು ಹೋಗಲು ಪೂಜ್ಯರಾದ ಮ.ನಿ.ಪ್ರ. ಶ್ರೀ ಕುಮಾರ ಸ್ವಾಮಿ ಅವರು ಈ ಸಂಸ್ಥೆಯನ್ನ ಕಟ್ಟಿದ್ದಾರೆ ಅವರ ಆಶಯವನ್ನು ಸಭಾದ ಎಲ್ಲಾ ಅಧ್ಯಕ್ಷರು ಮುಂದುವರಿಸಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ, ಜೊತೆಗೆ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಹಾಸ್ಟೆಲ್ ನಿರ್ಮಾಣ ಮಾಡುವಂತೆ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವಂತೆ ಸಮುದಾಯಕ್ಜೆ ಮನವಿ ಮಾಡಿದರು.
ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಹಾಸಭಾ ಆಗಮಿಸಿದ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಸಮುದಾಯದ ಜನರು ತೋರಿದ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ವೀರಶೈವ ಲಿಂಗಾಯತ ಮಠಗಳು ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯನ್ನು ಉಳಿಸಿವೆ. ಸಂಸ್ಕೃತಿ ಸಮುದಾಯದ ಸೋಪಾನವಾಗಿದೆ ಎಂದರು.
ಇಂದು ಸಮುದಾಯದ ಅನೇಕರು ಬಡತನ ರೇಖೆಗಿಂತ ಕೆಳಗಿದ್ದಾರೆ ಅವರನ್ನು ಮೇಲೆತ್ತುವ ಕಾರ್ಯ ಆಗಬೇಕು ಎಂದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದರಿಂದಲೇ 35ಕ್ಕೂ ಹೆಚ್ಚು ಲಿಂಗಾಯತ ವೀರಶೈವ ಸಮಾಜದ ಶಾಸಕರು ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದರು.
ಮಹಾ ಸಭಾದ ಸಚ್ಚಿದಾನಂದ ಮೂರ್ತಿ, ಸಗರನಹಳ್ಳಿ ನಟರಾಜ್, ರೇಣುಕಾ ಪ್ರಸನ್ನ, ಗಂಗಮ್ಮ ಮೊದಲಾದವರು ಉಪಸ್ಥಿತರಿದ್ದರು.