ಬೆಂಗಳೂರು: ಇನ್ಸ್’ಪೆಕ್ಟರ್ ಅವರು ಪಬ್ ಮತ್ತು ಬಾರ್’ನಿಂದ ಮಾಮೂಲಿ ಪಡೆಯುತ್ತಾರೆ ಎಂದು ಆರೋಪಿಸಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ನಗರದ ಇಬ್ಬರು ಪೊಲೀಸ್ ಕಾನ್ಸ್’ಟೇಬಲ್’ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಶಿವಕುಮಾರ್, ವಿಜಯ್ ರಾಥೋಡ್ ಸಸ್ಪೆಂಡ್ ಆದ ಕಾನ್ಸ್ಟೇಬಲ್’ಗಳಾಗಿದ್ದಾರೆ. ಶಿವಕುಮಾರ್ ಮತ್ತು ವಿಜಯ್ ರಾಥೋಡ್ ಸುಬ್ರಹ್ಮಣ್ಯನಗರ ಠಾಣೆ ಇನ್ಸ್’ಪೆಕ್ಟರ್ ಶರಣಗೌಡ ವಿರುದ್ಧ ಪಬ್ ಮತ್ತು ಬಾರ್’ನಿಂದ ಮಾಮೂಲಿ ಪಡೆಯುತ್ತಾರೆ ಎಂದು ಆರೋಪಿಸಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದರು.
ಕಾನ್ಸ್ಟೇಬಲ್ಗಳು ಪತ್ರದಲ್ಲಿ ಇನ್ಸ್ಪೆಕ್ಟರ್ ಭ್ರಷ್ಟಾಚಾರ ಮಾಡುತ್ತಾರೆ ಎಂದು ಆರೋಪಿಸಿ ಸವಿವರವಾಗಿ ಪತ್ರ ಬರೆದಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಇದು ಸುಳ್ಳು ಆರೋಪ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕಾನ್ಸ್’ಟೇಬಲ್’ಗಳಾದ ಶಿವಕುಮಾರ್ ಹಾಗೂ ವಿಜಯ್ ರಾಥೋಡ್’ರನ್ನು ಅಮಾನತು ಮಾಡಿ ಮಲ್ಲೇಶ್ವರಂ ಠಾಣೆಯ ಎಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.