ತುಮಕೂರು: ಶಿವಕುಮಾರ ಮಹಾಶಿವಯೋಗಿ ಶ್ರೀಗಳು ಬಸವಾದಿ ಶರಣರ ಆಶಯಗಳನ್ನು ಆಚರಿಸಲು ಬದುಕನ್ನು ಮುಡಿಪಾಗಿಟ್ಟು ನುಡಿದಂತೆ ನಡೆದ ಮಹಾಯೋಗಿಗಳು. ಅವರಿಗೆ ಭಾರತ ರತ್ನ ನೀಡಬೇಕು. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ ಸ್ಮೃತಿ ವನವನ್ನು ಉದ್ಘಾಟಿಸಿ ಮತ್ತು ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12 ನೇ ಶತಮಾನದಲ್ಲೇ ಬಸವಾದಿ ಶರಣರು ಜಾತಿ ರಹಿತ, ವರ್ಗ ರಹಿತ ಸಮಾನತಾ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೇ ಮಾಡಿದ್ದರು. ಮನುಷ್ಯ ಕುಲ ಇರುವವರೆಗೂ ಶಾಶ್ವತ ಆಗಿ ಉಳಿಯುವ ಸಂದೇಶ ಮತ್ತು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಈ ಮೌಲ್ಯಗಳನ್ನು ಪಾಲಿಸುವುದೇ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ ಎಂದರು.
ಭಾರತ ಸಂವಿಧಾನದ ಆಶಯ ಮತ್ತು ಬಸವಾದಿ ಶರಣರ ಹೋರಾಟದ ಆಶಯ ಒಂದೇ ಆಗಿದೆ. ನಮಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ. ಜನರ ಬದುಕನ್ನು ಎತ್ತಿರುವುದೇ ಈ ಸಂವಿಧಾನ ಎಂಬ ಧರ್ಮಗ್ರಂಥದ ಆಶಯ ಎಂದು ಸಿಎಂ ವಿವರಿಸಿದರು.
ಕಾಯಕ ಮತ್ತು ದಾಸೋಹ ಎರಡೂ ಜೀವನ ಮೌಲ್ಯಗಳು. ಈ ಮೌಲ್ಯಗಳನ್ನು ಶ್ರೀಗಳು ತಮ್ಮ ಬದುಕಿನುದ್ದಕ್ಕೂ ಆಚರಿಸಿದ್ದರು. ಇಂದು 10 ಸಾವಿರ ಮಕ್ಕಳಿಗೆ ಮಠದಲ್ಲಿ ವಿದ್ಯೆ, ವಸತಿ, ಅನ್ನ ಪಡೆಯುತ್ತಿದ್ದಾರೆ ಎಂದರೆ ಶಿವಕುಮಾರ ಮಹಾಯೋಗಿಗಳ ಬದುಕಿನ ಆಚರಣೆಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.