ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲಿ ನೋಡೋಣ ಎಂದು ಮಾಜಿ ಸಚಿವ ಡಾ ಕೆ ಸುಧಾಕರ್ ಸವಾಲು ಹಾಕಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿ ಸ್ವತಂತ್ರವಾಗಿ ನನ್ನ ವಿರುದ್ಧ ಸ್ಪರ್ಧಿಸಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೇ ಬಿಡೋಣ ಎಂದು ಡಾ ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಶಾಸಕರಿಗೆ ಸವಾಲು ಹಾಕಿದ್ದಾರೆ. ಅಲ್ಲದೇ ನಾನು ಸಹ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತೇನೆ. ನಿಮಗೆ ಎಷ್ಟು ವೋಟು ಬರುತ್ತದೆ. ನನಗೆ ಎಷ್ಟು ವೋಟು ಬರುತ್ತದೆ ನೋಡೋಣ. ಒಂದು ವರ್ಷದಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಇಲ್ಲದ ಕಡೆ ಗೆದ್ದು ನನ್ನ ಶಕ್ತಿ ತೋರಿಸಿದ್ದೇನೆ. ಇದೇ ರೀತಿ ಗೆದ್ದು ತೋರಿಸುವಂತೆ ಸವಾಲು ಹಾಕಿದ್ದಾರೆ. ಈಶ್ವರ್ ಮುಖ ನೋಡಿದರೆ 5,000 ವೋಟು ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕರ ಬೆಂಬಲಿಗರು ಹಲ್ಲೆ ಯತ್ನ ನಡೆಸಿ ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಎಸ್ಪಿ ಕಚೇರಿ ಬಳಿ ಸುಧಾಕರ್ ನೇತೃತ್ವದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸುಧಾಕರ್ ಬೆಂಬಲಿಗರು ಧಿಕ್ಕಾರ ಕೂಗಿದ್ದಾರೆ. ಬಳಿಕ ಎಸ್ಪಿ ಡಿ.ಎಲ್ ನಾಗೇಶ್ ಅವರಿಗೆ ದೂರು ನೀಡಿದ್ದಾರೆ.