ಮಂಗಳೂರು: ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರು ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಹೇಳಲಿ ಎಂದು ಮಾಜಿ ಸಚಿವ ರಮನಾಥ ರೈ ಸವಾಲು ಹಾಕಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಪ್ಪು ಹಣ ತರುತ್ತೇವೆ ಎಂದವರು ತಂದಿದ್ದಾರೆಯೇ? ಪ್ರಣಾಳಿಕೆಯಲ್ಲಿ ಘೋಷಿರುವಂತೆ ಉದ್ಯೋಗ ನೀಡಿದಾರೆಯೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಯಾವತ್ತೂ ಜನಪರ, ಬಡವರ ಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ.
ಬಿಜೆಪಿ ತಮ್ಮ ಅವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಯಾವ ಸಾಧನೆ ಮಾಡಿದೆ ಎಂಬುದನ್ನು ಹೇಳಬೇಕು. ಸಾಮಾಜಿಕ ಸಾಮರಸ್ಯಕ್ಕೆ ತೊಂದರೆ ನೀಡುವ ಕೆಲಸ ಜೊತೆ ಅವರಿಗೆ ವೋಟು ಹೇಗೆ ಬರುತ್ತೆ ಅನ್ನುವ ನೆಲೆಯಲ್ಲಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾತ್ರ ಬಿಜೆಪಿ ಅವಧಿಯಲ್ಲಿ ಆಗಿದೆ ಎಂದು ಆರೋಪಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ವಿಷಯದಲ್ಲಿ ಪ್ರಧಾನಿಯವರು ಬಯಸಿದ್ದರೆ ಅವಕಾಶ ಸಿಗುತ್ತಿತ್ತು. ಆದರೆ ಆ ಕಾರ್ಯ ಮಾಡದೆ ಇದೀಗ ನಾರಾಯಣ ಗುರುಗಳ ಮೂರ್ತಿಗೆ ಹಾರಾರ್ಪಣೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.