ವಾಗ್ಯುದ್ಧ, ಜನಾಗೀಯ ನಿಂದನೆ ಸೇರಿದಂತೆ ಹಲವು ಘಟನೆಗೆ ಸಾಕ್ಷಿಯಾಗಿರುವ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ, ಇಂಗ್ಲೆಂಡ್ ಬ್ಯಾಟಿಂಗ್‌ನ ಮೊದಲ ಇನಿಂಗ್ಸ್‌ನಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ವಿರುದ್ಧ ಕೆಂಡಾ ಮಂಡಲರಾದ ಅಂಪೈರ್ ರಿಚರ್ಡ್ ಕೆಟಲ್ಬರೊ, “ಬಾಯಿ ಮುಚ್ಚಿಕೊಂಡು ಬ್ಯಾಟಿಂಗ್ ಮಾಡು” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಟೆಸ್ಟ್ ಪಂದ್ಯದ ಮೂರನೇ ದಿನ ಈ ಘಟನೆ ನಡೆದಿದ್ದು, ಭಾರತದ ನಾಯಕ ಜಸ್‌ಪ್ರೀತ್ ಬುಮ್ರಾ ಹೆಚ್ಚಾಗಿ ಶಾರ್ಟ್ ಪಿಚ್ ಎಸೆತಗಳನ್ನು ಎಸೆಯುತ್ತಿದ್ದರು. ಇದರಿಂದ ಕೋಪಗೊಂಡ ಬ್ರಾಡ್, ಅಂಪೈರ್ ಬಳಿ ದೂರಿಕೊಂಡಿದ್ದರು. ಆದರೆ ಬ್ರಾಡ್ ನಡೆ ಬೌಲಿಂಗ್ ತುದಿಯಲ್ಲಿ ಪಂದ್ಯವನ್ನು ನಿರ್ವಹಣೆ ಮಾಡುತ್ತಿದ್ದ ರಿಚರ್ಡ್ ಕೆಟಲ್ಬರೊಗೆ ಇಷ್ಟವಾಗಲಿಲ್ಲ. ಬ್ರಾಡ್‌ರನ್ನ ತನ್ನತ್ತ ಕರೆದ ರಿಚರ್ಡ್, “ಅಂಪೈರಿಂಗ್ ಕೆಲಸವನ್ನು ನಮಗೆ ಬಿಟ್ಟುಬಿಡಿ, ನೀವು ಬ್ಯಾಟಿಂಗ್ ಕಡೆ ಗಮನಕೊಡಿ” ಎಂದು ಉತ್ತರಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಸ್ಟುವರ್ಟ್ ಬ್ರಾಡ್ ಮಾತು ಮುಂದುವರಿಸಿದ್ದಾರೆ. ಇದರಿಂದ ಕೋಪಗೊಂಡ ಅಂಪೈರ್ ರಿಚರ್ಡ್ ಕೆಟಲ್ಬರೊ, “ನೀವು ಮತ್ತೆ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೀರಿ. ಓವರ್‌ನಲ್ಲಿ ಒಮ್ಮೆ ಮಾತ್ರ ಹೇಳಲು ಸಾಧ್ಯ. ಬ್ರಾಡಿ… ಬ್ರಾಡಿ… ಬಾಯಿಮುಚ್ಚಿಕೊಂಡು ಬ್ಯಾಟಿಂಗ್ ಮಾಡಿ” ಎಂದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಐದು ಎಸೆತ ಎದುರಿಸಿದ್ದ ಸ್ಟುವರ್ಟ್ ಬ್ರಾಡ್, ಮುಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಕೀಪರ್ ಪಂತ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಇದಕ್ಕೂ ಮೊದಲು ಒಂದೇ ಓವರ್‌ನಲ್ಲಿ 35 ರನ್ ಬಿಟ್ಟುಕೊಡುವ ಮೂಲಕ ಸುವರ್ಟ್ ಬ್ರಾಡ್, ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ರನ್ (35) ಬಿಟ್ಟುಕೊಟ್ಟ ಬೌಲರ್ ಎಂಬ ಕೆಟ್ಟ ದಾಖಲೆಯನು ತನ್ನದಾಗಿಸಿಕೊಂಡಿದ್ದರು. ಈ ವೇಳೆ ಸ್ಟ್ರೈಕ್‌ನಲ್ಲಿದ್ದ ಜಸ್‌ಪ್ರೀತ್ ಬುಮ್ರಾ 29 ರನ್‌ಗಳನ್ನು ಚಚ್ಚಿದ್ದರು.