► ನಳಿನ್ ಕುಮಾರ್ ಕಟೀಲ್ ಬದಲಾಯಿಸುವ ಬಗ್ಗೆ ಆಂತರಿಕ ಚರ್ಚೆ
ಬೆಂಗಳೂರು: ಶೀಘ್ರ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಚೆರ್ಚೆಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಕೆಲವು ಅಸಮರ್ಥ ಸಚಿವರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಖಾತೆಗೂ, ಪಕ್ಷಕ್ಕೂ ನ್ಯಾಯ ನೀಡದ ಪಕ್ಷಕ್ಕೆ ಹೊರೆಯಾಗಿರುವವರ ಬಗ್ಗೆ ಮುಖ್ಯಮಂತ್ರಿ ಅವರು ಗಮಹರಿಸಬೇಕು ಎಂದಿದ್ದಾರೆ. ಇಂದು ಬೆಳಗ್ಗೆ ಹಲವು ಕಾರ್ಯಕರ್ತರು ತಮ್ಮನ್ನು ಭೇಟಿಯಾಗಲು ಬಂದಿದ್ದರು. ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ ವಿಳಂಬದ ಬಗ್ಗೆ ಈ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು. ನಿಗಮ ಮಂಡಳಿಗಳ ನೇಮಕ ಬಹು ಹಿಂದೆಯೇ ಆಗಬೇಕಿತ್ತು. ಯಾಕೆ ಆಗಿಲ್ಲ ಎಂಬುದು ಗೊತ್ತಿಲ್ಲ. ಹಲವರು ಪರಿಸ್ಥಿತಿಯ ಲಾಭ ಪಡೆದು ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಮುಂದುವರೆಯವ ಮೂಲಕ ಪರಿಸ್ಥಿತಿಯ ಲಾಭ ಪಡೆದು ಹುದ್ದೆಗಳಲ್ಲಿ ಮೋಜು ಮಾಡುತ್ತಿದ್ದಾರೆ. ಪಕ್ಷಕ್ಕೆ ಕೊಡುಗೆ ನೀಡದವರನ್ನು ಕೈಬಿಟ್ಟು ಪಕ್ಷಕ್ಕೆ ದುಡಿದವರನ್ನು ನಿಗಮ ಮಂಡಳಿಗಳಿಗೆ ಕೂಡಲೇ ನೇಮಕ ಮಾಡಬೇಕು ಎಂದು ಅವರು ಹೇಳಿದರು.
ಈಗಾಗಲೇ ನಿಗಮ ಮಂಡಳಿಗಳಿಗೆ ನೇಮಕ ಆಗಬೇಕಿತ್ತು. ಈವರೆಗೂ ಯಾಕೆ ಆಗಿಲ್ಲ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ನಾಯಕತ್ವ ಹಾಗೂ ಸಚಿವರು ಮತ್ತು ಪಕ್ಷದ ಅಧ್ಯಕ್ಷರು ಬದಲಾಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ಮಾಧ್ಯಮದವರು ಮುಖ್ಯಮಂತ್ರಿ ಸಚಿವರು ಸೇರಿದಂತೆ ಎಲ್ಲರನ್ನೂ ಬದಲಾಯಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಈಗಿರುವ ಸ್ಥಾನ ಮಾನಕ್ಕಿಂತ ಬೇರೆ ಹುದ್ದೆ ನೀಡಲಾಗುತ್ತದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಉಪಾಧ್ಯಕ್ಷ ಹುದ್ದೆ ಸಣ್ಣ ಹುದ್ದೆ ಏನಲ್ಲ. ಉಪಾಧ್ಯಕ್ಷರ ಹುದ್ದೆಯನ್ನು ಸಣ್ಣ ಹುದ್ದೆ ಎಂದು ಪರಿಗಣಿಸಿದರೆ ನಾ ಏನು ಹೇಳಬೇಕೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಹೋಳಿ ಹಬ್ಬದ ನಂತರ ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಗೋವಾ ಚುನಾವಣಾ ಉಸ್ತುವಾರಿ ಹೊತ್ತಿದ್ದ ಸಿ.ಟಿ. ರವಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕಾಂಗ್ರೆಸ್ ನ ವರು ಹಳೆ ಗಂಡನ ಪಾದವೇ ಗತಿ ಎಂದು ಗಾಂಧಿ ಕುಟುಂಬಕ್ಕೆ ಮತ್ತೆ ಮಣೆ ಹಾಕಿದ್ದಾರೆ. ಸೋಲಿನ ಮೇಲೆ ಸೋಲು, ಹೀನಾಯ ಸೋಲುಗಳು ಆಗುತ್ತಿದ್ದರೂ ಸೋನಿಯಾಗಾಂಧಿ ಅವರೇ ಇರಬೇಕು ಎಂಬ ಭಾವನೆ ಕಾಂಗ್ರೆಸ್ ನಾಯಕರುಗಳ ಬಗ್ಗೆ ವ್ಯಂಗ್ಯವಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಪಿ ರವಿ ನೀಡಿರುವ ಹೇಳಿಕೆ ಬಿಜೆಪಿ ಪಾಳಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಸ್ತುತ ಬಜೆಟ್ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಮುಂದಾಗಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂತ್ರಿಮಂಡಲ ವಿಸ್ತರಣೆ ವೇಳೆ ಹೊಸ ಮುಖಗಳಿಗೆ ಮಣೆ ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಅಂಶವನ್ನು ಮನಗಂಡಿರುವ ಹೈಕಮಾಂಡ್ ಕೆಲವು ಹಿರಿಯ ಸಚಿವರಿಗೆ ಕೊಕ್ ನೀಡಿ ಅವರ ಜಾಗದಲ್ಲಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಾಲಿ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸುವ ಬಗ್ಗೆಯೂ ಪಕ್ಷದ ಆಂತರಿಕ ಮಟ್ಟದಲ್ಲಿ ಚರ್ಚೆಗಳು ಗರಿಗೆದರಿವೆ.