ಬೆಂಗಳೂರು: ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ರವಿವಾರ ಹೃದಯಾಘಾತದಿಂದ ನಿಧನರಾದ ಹಿನ್ನಲೆಯಲ್ಲಿ ಸೋಮವಾರದ ವಿಧಾನಮಂಡಲದ ಕಲಾಪವನ್ನು ಬುಧವಾರಕ್ಕೆ ಮುಂದೂಡುವುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಆದರೆ ಬಳಿಕ ಸ್ಪೀಕರ್ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸೋಮವಾರ ನಿಗದಿಯಂತೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ ಎಂಬುದಾಗಿ ಮಾಹಿತಿ ನೀಡಿದೆಯೆಂದು ತಿಳಿದುಬಂದಿದೆ.
ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾದ ಕಾರಣ, ಸೋಮವಾರದ ವಿಧಾನಮಂಡಲದ ಕಲಾಪ ಮುಂದೂಡುವ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದರು. ಮಂಗಳವಾರದಂದು ರಾಜ್ಯಸಭಾ ಚುನಾವಣೆಯ ಕಾರಣ ಬುಧವಾರಕ್ಕೆ ವಿಧಾನಮಂಡಲದ ಕಲಾಪ ಮುಂದೂಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ತಿಳಿಸಿದ್ದರು.
ಆದರೆ ಈಗ ಸ್ಪೀಕರ್ ಕಚೇರಿಯಿಂದ ಶಾಸಕರಿಗೆ ಮೆಸೇಜ್ ರವಾನೆ ಮಾಡಲಾಗಿದ್ದು, ಸೋಮವಾರ ನಿಗದಿಯಂತೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ ಎಂಬುದನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಕಾರ್ಯಕಲಾಪಗಳ ಪಟ್ಟಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೋಮವಾರ ಬೆಳಿಗ್ಗೆ 9.30ಕ್ಕೆ ವಿಧಾನಸಭೆ ಕಾರ್ಯಕಲಾಪಗಳಲ್ಲಿ ಭಾಗಿಯಾಗಲಿದ್ದೇನೆ. 10.30ಕ್ಕೆ ವಿಧಾನ ಪರಿಷತ್ ಕಾರ್ಯಕಲಾಪಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.