Home ಕರಾವಳಿ ಮುಸ್ಲಿಂ ಕೋಟಾದಲ್ಲಿ ಉದ್ಯಮಿ ಕಣಚೂರು ಮೋನುಗೆ ವಿಧಾನ ಪರಿಷತ್ ಸ್ಥಾನ?

ಮುಸ್ಲಿಂ ಕೋಟಾದಲ್ಲಿ ಉದ್ಯಮಿ ಕಣಚೂರು ಮೋನುಗೆ ವಿಧಾನ ಪರಿಷತ್ ಸ್ಥಾನ?

ಮಂಗಳೂರು: ಕಣಚೂರು ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿರುವ ಕಾಂಗ್ರೆಸ್ ಮುಖಂಡ ಕಣಚೂರು ಮೋನು(ಯು.ಕೆ ಮೋನು) ಅವರಿಗೆ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಲು 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮುಸ್ಲಿಂ ಕೋಟಾದಲ್ಲಿ ಕಣಚೂರು ಮೋನು ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

11 ಸ್ಥಾನಗಳಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇರುವುದರಿಂದ ಟಿಕೆಟ್‌ಗಾಗಿ ಲಾಬಿಯೂ ಹೆಚ್ಚಾಗಿದೆ. ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ಒಂದು ಟಿಕೆಟ್ ನೀಡಲು ಮುಂದಾಗಿದ್ದು, ಕರಾವಳಿಯ ಕೆಲ ನಾಯಕರು ಟಿಕೆಟ್ ರೇಸ್‌ನಲ್ಲಿದ್ದಾರೆ.‌

ಬಂಟ ಸಮುದಾಯದ ರಮನಾಥ ರೈ, ಬಿಲ್ಲವ ಸಮುದಾಯದ ವಿನಯ್ ಕುಮಾರ್ ಸೊರಕೆ, ಗೋಪಾಲ ಪೂಜಾರಿ ಮತ್ತು ಹರೀಶ್ ಕುಮಾರ್, ಕ್ರಿಶ್ಚಿಯನ್ ಸಮುದಾಯದ ಐವನ್ ಡಿಸೋಜಾ ಮತ್ತು ಮುಸ್ಲಿಂ ಸಮುದಾಯದ ಕಣಚೂರು ಮೋನು ವಿಧಾನ ಪರಿಷತ್ ಟಿಕೆಟ್ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ.

ಈ ಬಾರಿ ಕರಾವಳಿಯ ಮುಸ್ಲಿಂ ಸಮುದಾಯಕ್ಕೆ ಪರಿಷತ್ ಟಿಕೆಟ್ ನೀಡಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಕಣಚೂರು ಮೋನು ಅವರನ್ನು ಪರಿಗಣಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಸ್ತುತ ನ್ಯೂಸ್ ಜೊತೆ ಮಾತನಾಡಿರುವ ಕಣಚೂರು ಮೋನು ಅವರ ಆಪ್ತರು, ಕಣಚೂರು ಮೋನು ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದುಕೊಂಡು ಪಕ್ಷಕ್ಕೆ ತನು-ಮನ-ಧನ ಸಹಾಯ ನೀಡುತ್ತಿದ್ದಾರೆ. ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇವೆ. ನಮ್ಮ ಬೇಡಿಕೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಕಣಚೂರು ಮೋನು ಅವರಿಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ 11 ಸದಸ್ಯ ಅವಧಿ ಜೂನ್ 17ಕ್ಕೆ ಮುಕ್ತಾಯವಾಗಲಿದೆ. ಆ ಸ್ಥಾನಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ. ಮೇ 27ರಂದು ಚುನಾವಣೆಯ ಅಧಿಸೂಚನೆ ಪ್ರಕಟವಾಗಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜೂನ್ 13ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದ್ದು, ಸಂಜೆ 5 ಗಂಟೆ ಬಳಿಕ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

Join Whatsapp
Exit mobile version