ಜೈಪುರ: ʻಲೆಜೆಂಡ್ಸ್ ಲೀಗ್-2022ʼ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ಇಂಡಿಯಾ ಕ್ಯಾಪಿಟಲ್ಸ್, ಭಿಲ್ವಾರಾ ಕಿಂಗ್ಸ್ ತಂಡವನ್ನು 104 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಭಿಲ್ವಾರಾ ಕಿಂಗ್ಸ್ ಬಿಗು ಬೌಲಿಂಗ್ ದಾಳಿಗೆ ಆರಂಭದಲ್ಲಿ ಪತರಗುಟ್ಟಿದ್ದ ಕ್ಯಾಪಿಟಲ್ಸ್, 9 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿತ್ತು. 24 ರನ್ ತಲುಪುವಷ್ಟರಲ್ಲಿ 4ನೇ ವಿಕೆಟ್ ಕೂಟ ಪತನವಾಗಿತ್ತು. ಆದರೆ ಆ ಬಳಿಕ ಒಂದಾದ ನ್ಯೂಜಿಲ್ಯಾಂಡ್ನ ಮಾಜಿ ನಾಯಕ ರಾಸ್ ಟೇಲರ್ ಅಮೋಘ ಅರ್ಧಶತಕ (82 ರನ್, 41 ಎಸೆತ,4×4, 6×8 ) ಮತ್ತು ಆಸೀಸ್ ಅನುಭವಿ ವೇಗಿ ಮಿಚೆಲ್ ಜಾನ್ಸನ್ 32 ಎಸೆತಗಳಲ್ಲಿ 62 ರನ್‌ಗಳಿಸಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್ ನಷ್ಟದಲ್ಲಿ 211 ರನ್‌ಗಳಿಸಲು ನೆರವಾಗಿದ್ದರು.
ರಾಹುಲ್ ಶರ್ಮಾ 30ರನ್ ನೀಡಿ 4 ವಿಕೆಟ್ ಪಡೆದರೆ, ಮಾಂಟಿ ಪನೇಸರ್ 3 ಓವರ್ಗಳ ದಾಳಿಯಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರು.
212 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಬ್ಯಾಟಿಂಗ್‌ಗೆ ಇಳಿದ ಇರ್ಫಾನ್ ಪಠಾಣ್ ಸಾರಥ್ಯದ ಭಿಲ್ವಾರಾ ಕಿಂಗ್ಸ್, ಯಾವುದೇ ಹಂತದಲ್ಲೂ ಗೆಲುವಿಗಾಗಿ ಹೋರಾಡಲಿಲ್ಲ. 7 ಮಂದಿ ಬ್ಯಾಟರ್‌ಗಳು ಎರಡಂಕಿಯ ಮೊತ್ತವನ್ನೇ ತಲುಪಲಿಲ್ಲ. 27 ರನ್‌ಗಳಿಸಿದ ಶೇನ್ ವಾಟ್ಸನ್ ಅವರದ್ದೇ ಟಾಪ್ ಸ್ಕೋರ್. ಜೇಸಲ್ ಕರಿಯಾ 22 ರನ್, ಯೂಸುಫ್ ಪಠಾಣ್ 6 ರನ್, ನಾಯಕ ಇರ್ಫಾನ್ ಕೇವಲ 2 ರನ್‌ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ 18.2 ಓವರ್‌ಗಳಲ್ಲಿ ಕಿಂಗ್ಸ್, 107ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು.
ಕ್ಯಾಪಿಟಲ್ಸ್ ಪರ ಪವನ್ ಸುಯಲ್ (2/27), ಪಂಕಜ್ ಸಿಂಗ್ (2/14) ಮತ್ತು ಪ್ರವೀಣ್ ತಾಂಬೆ (2/19) ತಲಾ ಎರಡು ವಿಕೆಟ್ ಪಡೆದರು.
ಭಾನುವಾರ ನಡೆದಿದ್ದ ಕ್ವಾಲಿಫೈಯರ್-1 ಪಂದ್ಯದಲ್ಲಿ ಉಭಯ ತಂಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ 4 ವಿಕೆಟ್ ಅಂತರದಲ್ಲಿ ಗೆದ್ದು, ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಿಲ್ವಾರಾ ಕಿಂಗ್ಸ್, 5 ವಿಕೆಟ್ ನಷ್ಟದಲ್ಲಿ 226 ರನ್ ಗಳಿಸಿತ್ತು. ಕಠಿಣ ಗುರಿ ಚೇಸ್ ಮಾಡಿದ ಕ್ಯಾಪಿಟಲ್ಸ್, ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.