ಬಂಧಿತ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದರೆ ಕಾನೂನು ಹೋರಾಟ: ಎಸ್ ಡಿಪಿಐ

Prasthutha|

►ಬ್ಯಾನ್ ಮಾಡಲು ಇದು ಕಾಡಲ್ಲಿ ಕಟ್ಟಿದ ಪಕ್ಷವಲ್ಲ

ಮಂಗಳೂರು: ಪಿಎಫ್ ಐ ಕಚೇರಿಗೆ ದಾಳಿ ನಡೆಸುವ ವಾರಂಟ್ ಪಡೆದು ಎಸ್ ಡಿಪಿಐ ಕಚೇರಿಗೆ ದಾಳಿ ನಡೆಸಿದ್ದು ಕಾನೂನು ಉಲ್ಲಂಘನೆಯಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಬಂಧಿತ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಜಾನೆ 3.30ರ ಸುಮಾರಿಗೆ ಪಕ್ಷದ ಜಿಲ್ಲಾ ಕಚೇರಿಗೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ. ವಿಷಯ ತಿಳಿದು ಬೆಳಗ್ಗೆ 5.30ರ ಹೊತ್ತಿಗೆ ನಾನು ಇಲ್ಲಿಗೆ ಬಂದು, ಯಾವ ಆಧಾರದಲ್ಲಿ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದಾಗ, ಅಧಿಕಾರಿಗಳು ಕೋರ್ಟ್ ವಾರಂಟ್ ತೋರಿಸಿದರು. ಅದನ್ನು ಪರಿಶೀಲಿಸಿದಾಗ, ಅದರಲ್ಲಿ ಅನುಮತಿ ಇರುವುದು ಪಿಎಫ್ಐ ಕಚೇರಿ ಶೋಧಕ್ಕೆ ಮಾತ್ರ ಎಂದು ಉಲ್ಲೇಖಿಸಲಾಗಿತ್ತು. ಇದು ಎಸ್ ಡಿಪಿಐ ಜಿಲ್ಲಾ ಕಚೇರಿ, ಇಲ್ಲಿಗೆ ಯಾಕೆ ದಾಳಿ? ಎಂದು ಪ್ರಶ್ನಿಸಿದಾಗ ಅವರಲ್ಲಿ ಸಮರ್ಪಕವಾದ ಉತ್ತರವಿರಲಿಲ್ಲ ಎಂದು ಹೇಳಿದರು.

ಕಚೇರಿಯ ಬೀಗ ಒಡೆದು, ಗ್ಲಾಸ್ ಡೋರ್ ಧ್ವಂಸ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಜಿಲ್ಲಾಧ್ಯಕ್ಷರ ಚೇಂಬರ್ ಎಳೆದಾಡಿ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಚೇರಿಯ ಸಿಬ್ಬಂದಿ ಬಳಸುತ್ತಿದ್ದ ಕಂಪ್ಯೂಟರ್ ಮತ್ತು ಕಟ್ಟಡದ ಅಗ್ರಿಮೆಂಟ್, 2009ರಿಂದ ಪಕ್ಷ ನಡೆಸಿದ ಕಾರ್ಯಕ್ರಮಗಳ ಫೈಲ್, ಎರಡು ಹಾರ್ಡ್ ಡಿಸ್ಕ್, ಪಕ್ಷದ ಬುಕ್ ಲೆಟ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ರೀತಿ ಅತಿಕ್ರಮ ಪ್ರವೇಶ ಮಾಡಿ ದಾಖಲೆ ಪತ್ರಗಳನ್ನು ಕೊಂಡೊಯ್ದ ಕ್ರಮವನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಈ ಬಗ್ಗೆ ಖ್ಯಾತ ವಕೀಲರೊಂದಿಗೆ ಚರ್ಚಿಸಿದ್ದು, ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಪಾಪ್ಯುಲರ್ ಫ್ರಂಟ್ ಎಂಬುದು ಸಾಮಾಜಿಕ ಸಂಘಟನೆಯಾಗಿದ್ದು, ಸಂವಿಧಾನದ ಅಧೀನದಲ್ಲಿ ಸಮುದಾಯ ಮತ್ತು ಸಮಾಜದ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಇಂತಹ ಸಂಘಟನೆಯ  5-6 ಜಿಲ್ಲಾ ನಾಯಕರು ಮತ್ತು ರಾಜ್ಯ ನಾಯಕರನ್ನು ಎನ್ ಐಎ ವಶಕ್ಕೆ ಪಡೆದಿದೆ. ಇದನ್ನು ನಾವು ಕಠಿಣ ಶಬ್ಧಗಳಿಂದ ಖಂಡಿಸುತ್ತೇವೆ. ಬಂಧಿತ ನಾಯಕರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದರೆ ನಾಳೆಯಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಎನ್ ಐಎ ನಡೆಸಿದ್ದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ದಾಳಿ. ಎಸ್ ಡಿಪಿಐ ದೇಶಾದ್ಯಂತ ವೇಗಗತಿಯಲ್ಲಿ ಬೆಳೆಯುತ್ತಾ ಬರುತ್ತಿದ್ದು, ಜನರು ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ.  ಪ್ರಭುತ್ವದ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದೆ.  ಇದರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು, ಎನ್ ಐಎಯನ್ನು ಛೂಬಿಟ್ಟು ದಾಳಿ ಮಾಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಮಾತನಾಡಿ, ಸಂಘಪರಿವಾರವನ್ನು ಮೆಚ್ಚಿಸುವ ಕೆಲಸವನ್ನು ಎನ್ ಐಎ ಮಾಡುತ್ತಿದೆ. ಇಂತಹ ಹತ್ತು ದಾಳಿಯಾದರೂ ನಾವು ಒಂದು ಹೆಜ್ಜೆ ಕೂಡ ಹಿಂದೆ ಇಡುವುದಿಲ್ಲ. ನೂರು ಪಟ್ಟು ಶಕ್ತಿಯುತವಾಗಿ ನಾವು ಮತ್ತೆ ಮೇಲೆ ಬರುತ್ತೇವೆ. ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ ಮತ್ತು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು.

ಸಂಘಪರಿವಾರ ಪ್ರೇರಿತವಾಗಿ NIA ದಾಳಿ ನಡೆಸಿದೆ. ಸಾಂವಿಧಾನಿಕ ಸಂಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡುತ್ತಿದೆ. ಎಲೆಕ್ಷನ್  ಹತ್ತಿರ ಬರುತ್ತಿರುವಾಗ ಇದು ಬಿಜೆಪಿ ನಡೆಸುವ ಷಡ್ಯಂತ್ರ ಎನ್ನುವುದು ಸ್ಪಷ್ಟ. ಇದು ಗೌಪ್ಯ ಸಭೆ ನಡೆಯುವ ಕಚೇರಿಯಲ್ಲ. ಇದೊಂದು ಚುನಾವಣಾ ಆಯೋಗದಲ್ಲಿ ನೋಂದಣೆಗೊಂಡ ಪಕ್ಷ. ಇಲ್ಲಿಗೆ ಸಾವಿರಾರು ಮಂದಿ ಅಹವಾಲು ಹೇಳಿ ಬರುತ್ತಾರೆ. ಹಾಗಿರುವಾಗ ಇವರು ಗ್ಲಾಸ್ ಹೊಡೆದು ಕಳ್ಳರಂತೆ ನುಗ್ಗುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ ತಣಿಸಲು ಮೋದಿ ಆಗಮನ ಮತ್ತು ಎನ್ಐಎ ದಾಳಿ  ನಡೆದಿದೆ. ದೇಶ ಪ್ರಗತಿಪರ ಪಥದಲ್ಲಿ ನಡೆಯುತ್ತಿಲ್ಲ. ಈ ವೈಫಲ್ಯವನ್ನು ಮುಚ್ಚಿಹಾಕಲು ಇವೆಲ್ಲಾ ಮಾಡುತ್ತಿದ್ದಾರೆ. ಇದು ಕಾಡಲ್ಲಿ ಕಟ್ಟಿದ ಸಂಘಟನೆಯಲ್ಲ. ನಾಡಲ್ಲಿ ಕಟ್ಟಿದ ಪಕ್ಷ. ಇದು ಕೇವಲ SDPI ,PFI ಗೆ ಮಾತ್ರ ಸೀಮಿತವಲ್ಲ. ಇಂತಹ ದಾಳಿ ಎಲ್ಲಾ ವಿರೋಧ ಪಕ್ಷಗಳಿಗೂ ನಡೆಯುತ್ತಿವೆ. ಆದ್ದರಿಂದ ಜಾತ್ಯತೀತ ಪಕ್ಷಗಳೆಲ್ಲವೂ ಒಟ್ಟಾಗಿ ಹೋರಾಡಬೇಕು. ಪ್ರಗತಿಪರ ಸಂಘಟನೆಗಳು ಜೊತೆಯಾಗಿ ಮನುವಾದಿ ಸರಕಾರ ವಿರುದ್ಧ ನಿಲ್ಲಬೇಕು. ನಾವು ಶರಣಾಗಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕಟ್ಟಿಕೊಟ್ಟ ಸಂವಿಧಾನದ ಅಡಿಯಲ್ಲಿ ನಾವು ಪಕ್ಷವನ್ನು ಖಂಡಿತಾ ಮುಂದುವರಿಸುತ್ತೇವೆ. ನಮ್ಮನ್ನು ಹದ್ದುಬಸ್ತಿನಲ್ಲಿಡುವ ಕನಸು ಬಿಟ್ಟುಬಿಡಿ ಎಂದು ಅವರು ಹೇಳಿದರು.

 ಜಿಲ್ಲಾ ಮುಖಂಡ ಜಲೀಲ್ ಕೃಷ್ಣಾಪುರ ಮಾತನಾಡಿ, ಪಿಎಫ್ ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಇಂಡಿಯಾ ಬ್ಯಾನ್ ಮಾಡುವ ಪ್ರಯತ್ನದ ಕುರಿತ ಪ್ರಶ್ನೆಗೆ ಉತ್ತರಿಸಿ, ತೋಚಿದಂತೆ ಬ್ಯಾನ್ ಮಾಡಲು ಇದು ಗೂಡಂಗಡಿಯಲ್ಲ. ಇದು ಚುನಾವಣಾ ಆಯೋಗದಲ್ಲಿ ನೋಂದಣೆಗೊಂಡ ಪಕ್ಷ. ಹಾಗೇ ಹೇಳಿದವರ ವಿರುದ್ದವೂ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಉಪಸ್ಥಿತರಿದ್ದರು.

- Advertisement -