ಬೆಂಗಳೂರು: ನಾನು ಲಿಂಗಾಯತ, ನಾನು ಒಕ್ಕಲಿಗ, ಆ ಜಾತಿ, ಈ ಜಾತಿ ಅಂತ ಬಿಟ್ಟು ನಾನು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಅಂತ ಭಾವಿಸಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ ಕೆಲಸ ಮಾಡಬೇಕೆಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಕರ್ನಾಟಕ ಬಿಜೆಪಿಯ 11ನೇ ಅಧ್ಯಕ್ಷರಾಗಿ ಶಾಸಕ ವಿಜಯೇಂದ್ರ ಇಂದು ಅಧಿಕಾರ ಸ್ವೀಕರಿಸಿದರು. ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ವಿಜಯೇಂದ್ರ ಅವರಿಗೆ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಅವರು, 28ಕ್ಕೆ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದು ಈಗ ನಮ್ಮ ಮುಂದಿರುವ ಗುರಿ. ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ. ಒಂದು ದಿನವೂ ರಜೆ ತೆಗೆದುಕೊಳ್ಳದೇ ಭಾರತ ದೇಶವನ್ನು ಅಗ್ರಮಾನ್ಯ ದೇಶವನ್ನಾಗಿ ಮಾಡಬೇಕು ಎಂದು ಕನಸು ಕಾಣುತ್ತಿರುವ ಪ್ರಧಾನಿ ಮೋದಿ ಅವರ ಬಲವನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.