Home ಟಾಪ್ ಸುದ್ದಿಗಳು ತುರ್ತಾಗಿ ಉಕ್ರೇನ್ ತೊರೆಯಿರಿ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರಿ ಆದೇಶ

ತುರ್ತಾಗಿ ಉಕ್ರೇನ್ ತೊರೆಯಿರಿ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರಿ ಆದೇಶ

ನವದೆಹಲಿ: ಉಕ್ರೇನ್-ರಷ್ಯಾ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿರುವ ಮಧ್ಯೆ ತುರ್ತಾಗಿ ಯಾವುದೇ ವಿಧಾನದಲ್ಲಾದರೂ ಉಕ್ರೇನ್ ತೊರೆಯುವಂತೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಂಗಳವಾರ ಆದೇಶ ನೀಡಿದೆ.

ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯರು ಇಂದು ಲಭ್ಯವಿರುವ ರೈಲುಗಳ ಮೂಲಕ ಅಥವಾ ಇತರ ಯಾವುದೇ ವಿಧಾನದಲ್ಲಾದರೂ ತುರ್ತಾಗಿ ಉಕ್ರೇನ್ ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ. ರಷ್ಯಾದ ಪಡೆ ಕೀವ್ ಬೀದಿಗಳನ್ನು ತಲುಪಿದ ಹಿನ್ನೆಲೆ ಮತ್ತು ನಿರಂತರ ವೈಮಾನಿಕ ದಾಳಿ ಪ್ರಾರಂಭವಾದ ಕಾರಣ ಭಾರತೀಯ ರಾಯಭಾರಿ ಕಚೇರಿಯಿಂದ ಈ ಹೇಳಿಕೆ ಹೊರಬಿದ್ದಿದೆ ಎಂದು ಹೇಳಲಾಗಿದೆ.

ಮಾರ್ಚ್ 1 ರಂದು ಮುಂಜಾನೆ ಸುಮಾರು 400 ವಿದಾರ್ಥಿಗಳು ರೈಲಿನ ಮೂಲಕ ಕೀವ್ ಅನ್ನು ಯಶಸ್ವಿಯಾಗಿ ತೊರೆದಿದ್ದಾರೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಕೀವ್’ನಿಂದ ಪಶ್ಚಿಮ ಗಡಿಗಳ ಕಡೆಗೆ 1000 ಕ್ಕೂ ಮಿಕ್ಕಿದ ಭಾರತೀಯ ವಿದ್ಯಾರ್ಥಿಗಳು ಹೊರಟಿರುವುದನ್ನು ರಾಯಭಾರಿ ಕಚೇರಿ ಖಚಿತಪಡಿಸಿದೆ.

ಇದರ ಹೊರತಾಗಿಯೂ ಕೆಲವು ವಿದ್ಯಾರ್ಥಿಗಳು ಉಕ್ರೇನ್ ರಾಜಧಾನಿ ಕೀವ್’ನಲ್ಲೇ ಉಳಿದಿದ್ದಾರೆ. ಈ ಮಧ್ಯೆ ತುರ್ತಾಗಿ ಎಲ್ಲಾ ಭಾರತೀಯ ನಾಗರಿಕರು ಉಕ್ರೇನ್ ತೊರೆಯುವಂತೆ ರಾಯಭಾರಿ ಕಚೇರಿ ನಿರ್ದೇಶಿಸಿದೆ. ಸುಲಭವಾಗಿ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಪಾಸ್ ಪೋರ್ಟ್, ಸಾಕಷ್ಟು ನಗದು, ತಿನ್ನಲು ಯೋಗ್ಯವಾದ ಆಹಾರ, ಚಳಿಗಾಲದ ಉಡುಪುಗಳು ಮತ್ತು ಅಗತ್ಯ ವಸ್ತುಗಳನ್ನು ಮಾತ್ರ ತಮ್ಮೊಂದಿಗೆ ಕೊಂಡೊಯ್ಯಲು ಸೂಚಿಸಲಾಗಿದೆ.

ಮಾತ್ರವಲ್ಲ ತಮ್ಮ ಸಾಮಾಗ್ರಿಗಳ ಬಗ್ಗೆ ಎಲ್ಲಾ ಸಂದರ್ಭದಲ್ಲಿಯೂ ಜಾಗೃತೆ ವಹಿಸುವಂತೆ ರಾಯಭಾರಿ ಕಚೇರಿ ಮೂಲಗಳು ಸಂತ್ರಸ್ತರನ್ನು ಎಚ್ಚರಿಸಿವೆ.

Join Whatsapp
Exit mobile version