ಮೈಸೂರು: ಸಚಿವ ವಿ ಸೋಮಣ್ಣ ಭಾಷಣ ಮಾಡುತ್ತಿದ್ದ ಮಧ್ಯೆಯೇ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಪರವಾಗಿ ಬೆಂಬಲಿಗರು ಜೈಕಾರ ಕೂಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ ವಿ. ರವಿಶಂಕರ್ ಪರವಾಗಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಸೋಮಣ್ಣ ಮಾತನಾಡುತ್ತಿದ್ದ ವೇಳೆ ವಿಜಯೇಂದ್ರ ಬೆಂಬಲಿಗರು ಜೈಕಾರ ಕೂಗಿದ್ದಾರೆ, ಆದರೆ ಇದಕ್ಕೆ ಸಿಡಿಮಿಡಿಗೊಂಡ ಸೋಮಣ್ಣ, ಸ್ವಲ್ಪ ಗೌರವ ಕೊಡುವುದನ್ನು ಕಲಿಯಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ್ದಕ್ಕೆ ಅತೃಪ್ತಿಗೊಂಡಿದ್ದ ಬಿ ವೈ ವಿಜಯೇಂದ್ರ ಬೆಂಬಲಿಗರು, ಸೋಮಣ್ಣ ಬಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಭಾಷಣದ ಮಧ್ಯೆಯೇ ಜೋರಾಗಿ ಘೋಷಣೆಗಳನ್ನು ಕೂಗಿದ್ದು ‘ವಿಜಯೇಂದ್ರ ಅವರೇ ಮುಂದಿನ ಮುಖ್ಯಮಂತ್ರಿ’ ಎಂದಿದ್ದಾರೆ. ಈ ವೇಳೆ ಕೋಪಗೊಂಡ ಸೋಮಣ್ಣ, ವಿಜಯೇಂದ್ರ ಅವರನ್ನು ಬಲಿಪಶು ಮಾಡಬೇಡಿ. ಗೆಲುವಿನ ಹೋರಾಟದಲ್ಲಿ ಒಗ್ಗಟ್ಟಾಗಬೇಕಾದ ಸಮಯವಿದು. ಯಾರನ್ನೂ ಶ್ರೇಷ್ಠರು ಅಥವಾ ಕೀಳಾಗಿ ಕಾಣಬಾರದು ಎಂದಿದ್ದಾರೆ.
ಸ್ವಲ್ಪ ಗೌರವ ಕೊಡುವುದನ್ನು ಕಲಿಯಿರಿ, ನಾನು ಕೂಡ ಐದಾರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. 40 ವರ್ಷ ರಾಜಕೀಯ ಮಾಡಿದ್ದೇನೆ, ಎಲ್ಲ ಆಟಗಳನ್ನು ನೋಡಿದ್ದೇನೆ. ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ. ಕೆಂಪೇಗೌಡರ ಊರಲ್ಲಿ ಐದು ಬಾರಿ ಶಾಸಕನಾಗಿ ಸ್ವತಂತ್ರವಾಗಿಯೂ ಗೆದ್ದಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಿದ ವಿಜಯೇಂದ್ರ, ನನ್ನನ್ನು ಕಡೆಗಣಿಸಲಾಗಿದೆ ಎನ್ನುವುದು ತಪ್ಪು ಕಲ್ಪನೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಗೆಲ್ಲಲು ಹೋರಾಟ ನಡೆಸುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.