Home ಕರಾವಳಿ ಸಲಫಿ ಮೂವ್ ಮೆಂಟ್ ನಿಂದ “ಲರ್ನ್ ದಿ ಕುರ್ ಆನ್” ಪರೀಕ್ಷಾ ಯೋಜನೆ

ಸಲಫಿ ಮೂವ್ ಮೆಂಟ್ ನಿಂದ “ಲರ್ನ್ ದಿ ಕುರ್ ಆನ್” ಪರೀಕ್ಷಾ ಯೋಜನೆ

ಮಂಗಳೂರು: ಸೃಷ್ಟಿಕರ್ತನಾದ ಅಲ್ಲಾಹನು ಮನುಕುಲಕ್ಕೆ ಅನುಗ್ರಹವಾಗಿ ಅವತೀರ್ಣಗೊಳಿಸಿದ ಕುರ್ ಆನನ್ನು ಮಾನವರೆಲ್ಲರೂ ಕಲಿಯಬೇಕೆಂಬ ಉದ್ದೇಶದಿಂದ ಸೌತ್ ಕರ್ನಾಟಕ ಸಲಫಿ ಮೂವ್‍ ಮೆಂಟ್ ಮತ್ತು ಅದರ ಅಂಗ ಸಂಸ್ಥೆಗಳಾದ ಸಲಫಿ ಗರ್ಲ್ಸ್ ಮೂವ್‍ ಮೆಂಟ್, ಸಲಫಿ ಎಜುಕೇಶನ್ ಬೋರ್ಡ್, ಸಲಫಿ ಯೂತ್ ವಿಂಗ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಎಮ್.ಜಿ.ಎಮ್ ರಿಯಾದ್ “ಲರ್ನ್ ದಿ ಕುರ್ ಆನ್” (ಕುರ್ ಆನ್ ಕಲಿಯಿರಿ) ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್‍ ಮೆಂಟ್ ಪ್ರಧಾನ ಕಾರ್ಯದರ್ಶಿ ಕೆ ಅಬ್ದುಲ್ ರಹಿಮಾನ್ ಉಪ್ಪಿನಂಗಡಿ ತಿಳಿಸಿದ್ದಾರೆ.

15 ವರ್ಷಗಳ ಸುದೀರ್ಘ ಯೋಜನೆಯಲ್ಲಿ ಈಗಾಗಲೇ 9 ಹಂತದ ಪರೀಕ್ಷೆಗಳು ಮುಗಿದಿವೆ. 6 ತಿಂಗಳಿಗೊಮ್ಮೆ ನಡೆಯುವ ಈ ಪರೀಕ್ಷೆಗಾಗಿ ಆಯ್ದ ಒಂದು ಕಾಂಡದ ಅರ್ಥ, ಶಬ್ದಾರ್ಥ ಮತ್ತು ವ್ಯಾಖ್ಯಾನ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲೀಷ್‍ ನಲ್ಲಿ ಸಿದ್ಧಪಡಿಸುತ್ತೇವೆ. ಈ ಯೋಜನೆಯ 10ನೇ ಹಂತದ ಪರೀಕ್ಷೆಯು ಇದೇ ಬರುವ ಆದಿತ್ಯವಾರ ಜುಲೈ 31 ರಂದು 10 ಕೇಂದ್ರಗಳಲ್ಲಿ (ಉಳ್ಳಾಲ, ಕಂಕನಾಡಿ, ತಲಪಾಡಿ, ಕುದ್ರೋಳಿ, ಚೊಕ್ಕಬೆಟ್ಟು, ಉಪ್ಪಿನಂಗಡಿ, ಫರಂಗಿಪೇಟೆ, ಮುಲ್ಕಿ, ದೇರಳಕಟ್ಟೆ ಮತ್ತು ಬಜಾಲ್) ನಡೆಯಲಿದೆ. ಈ ಪರೀಕ್ಷೆ ಬರೆಯಲು ಪುರುಷರು, ಮಹಿಳೆಯರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಅವಕಾಶವಿದೆ. ಕನ್ನಡ ಮತ್ತು  ಇಂಗ್ಲೀಷ್ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸಲಾಗುವುದು ಎಂದು ಅವರು ತಿಳಿಸಿದರು.

ಪವಿತ್ರ ಕುರ್‍ ಆನ್ ಸಕಲ ಮಾನವರ ಸನ್ಮಾರ್ಗಕ್ಕಾಗಿ ದೇವನಿಂದ (ಅಲ್ಲಾಹನಿಂದ) ಅವತೀರ್ಣಗೊಂಡ ಅಂತಿಮ ದೈವಿಕ ಗ್ರಂಥವಾಗಿದೆ. ಅದರ ಅನುಯಾಯಿಗಳಾದ ಮುಸ್ಲಿಮರಲ್ಲಿ ಹಲವರು ಪವಿತ್ರ ಕುರ್ ಆನ್‍ನಿಂದ ವಿಮುಖರಾಗಿ: ಅಸತ್ಯ, ಅನ್ಯಾಯ, ಅಕ್ರಮ, ಸುಳ್ಳು, ಕಳ್ಳತನ, ಕೊಲೆ, ಸುಲಿಗೆ, ವಂಚನೆ, ಕಾಪಟ್ಯ, ವಿದ್ವೇಷ, ಪರನಿಂದನೆ, ಬಡ್ಡಿ, ದೌರ್ಜನ್ಯ ಮುಂತಾದ ಕುರ್‍ ಆನ್ ನಿಷಿದ್ಧಗೊಳಿಸಿದ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಠೋರ ಸತ್ಯವಾಗಿದೆ. ಇದಕ್ಕೆ ಕಾರಣ ಕುರ್ ಆನ್ ಮತ್ತು ಪ್ರವಾದಿ ಚರ್ಯೆಗಳನ್ನು ಕಡೆಗಣಿಸಿ ಸ್ವೇಚ್ಛೆಯಂತೆ ಜೀವಿಸುವುದರಿಂದಾಗಿದೆ ಎಂದು ಕೆ.ಅಬ್ದುಲ್ ರಹಿಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version