ಕಲಬುರಗಿ: ವಿಜಯೇಂದ್ರ, ಸಿ.ಟಿ.ರವಿಯಂತಹ ನಾಯಕರು ರಾಜ್ಯದಲ್ಲಿ ಪಕ್ಷವನ್ನು ಒಡೆಯುತ್ತಿದ್ದಾರೆ. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಭಾರಿ ಪ್ರಮಾಣದ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದರು.
ಮಂಗಳವಾರ ಆಯೋಜಿಸಿದ್ದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಿತಿನ್ ಗುತ್ತೇದಾರ ಅವರು ಅಫಜಲಪುರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನನ್ನ ವಿರುದ್ಧ ಸ್ಪರ್ಧಿಸಿದಾಗ ಆರು ವರ್ಷ ಅಮಾನತು ಮಾಡಲಾಗಿತ್ತು. ವಿಜಯೇಂದ್ರ ಅವರು ಅಮಾನತು ನಿರ್ಧಾರ ಯಾವಾಗ ವಾಪಸ್ ಪಡೆದರು? ಅಮಾನತು ವಾಪಸ್ ಪಡೆಯುವ ಮುನ್ನ ಪಕ್ಷದ ಮುಖಂಡರನ್ನು ಕರೆದು ಮಾತನಾಡಬೇಕು ಎಂಬುದು ಇವರಿಗೆ ಗೊತ್ತಿಲ್ಲವೇ’ ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದರು. ‘ನಿತಿನ್ ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವಿಜಯೇಂದ್ರ, ಸಿ.ಟಿ. ರವಿ, ಪಿ.ರಾಜೀವ್ ಎಷ್ಟು ಹಣ ಪಡೆದಿದ್ದಾರೆ’ ಎಂದೂ ಪ್ರಶ್ನಿಸಿದರು.