Home ಟಾಪ್ ಸುದ್ದಿಗಳು ಬಡವರಿಗೆ ನಿವೇಶನ/ ಮನೆ ಕಟ್ಟಲು ಕಾನೂನು ಸರಳೀಕರಣ: ಮುಖ್ಯಮಂತ್ರಿ ಬೊಮ್ಮಾಯಿ

ಬಡವರಿಗೆ ನಿವೇಶನ/ ಮನೆ ಕಟ್ಟಲು ಕಾನೂನು ಸರಳೀಕರಣ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಬಡವರು ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಅವರು ಇಂದು ಯಲಹಂಕ ತಾಲ್ಲೂಕಿನ ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ ಮಾಡಿ ಮಾತನಾಡಿದರು.
ಬರುವ ದಿನಗಳಲ್ಲಿ ರಾಜ್ಯದಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ. ಭೂಮಿ ಬೆಲೆ ಹೆಚ್ಚಾಗಲು ಬೇಡಿಕೆ ಹೆಚ್ಚಾಗಿದೆ ಮತ್ತು ನಾವು ಮಾಡಿರುವ ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧಗಳನ್ನು ದೂರಮಾಡಿ ನೇರವಾಗಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವಸತಿಗಾಗಿಯೇ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲಾ ಕಾನೂನನ್ನು ಸರಳೀಕರಣ ಮಾಡಲಾಗುವುದು. ಹಾಗಾದಾಗ ಬಡವರಿಗೆ ಮನೆ ಹಾಗೂ ನಿವೇಶನ ನೀಡಬಹುದು ಎಂದರು.


ಸಮಸ್ಯೆಗಳಿಗೆ ಪರಿಹಾರ
3 ಲಕ್ಷಕ್ಕಿಂತ ಹೆಚ್ಚು ನಿವೇಶನಗಳನ್ನು ಸೋಮ್ಮಣ್ಣ ಅವರು ರಾಜ್ಯದಲ್ಲಿ ನೀಡಿರುವುದು ದಾಖಲೆ. ಪ್ರಗತಿಪರ ಚಿಂತನೆ ಮಾಡಿದಾಗ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ನಮ್ಮ ಸರ್ಕಾರ ಸಮಸ್ಯೆಯನ್ನು ಬಿಟ್ಟು ಹೋಗುವುದಿಲ್ಲ , ಪರಿಹಾರ ಕೊಟ್ಟು ಜನರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಕೆಲಸ ಮಾಡಲಿದೆ ಎಂದರು.


ಬಡವರಿಗೆ ಮನೆ
ತಾನು ಹಾಗೂ ತನ್ನ ಕುಟುಂಬ ಒಂದು ಸೂರಿನಡಿ ಗೌರವದಿಂದ ಬದುಕಬೇಕೆನ್ನುವುದು ಪ್ರತಿ ಮನುಷ್ಯನ ಆಸೆ. ಮನುಷ್ಯ ಮಾತ್ರವಲ್ಲದೇ ಪಕ್ಷಿಗಳು ಒಂದು ಗೂಡು ಕಟ್ಟಿ, ಸಂಸಾರ ಮಾಡುವುದು ಕಾಣುತ್ತೇವೆ. ಪಕ್ಷಿಗಳಿಗೆ ಇರುವ ಸೌಭಾಗ್ಯ ಮನುಷ್ಯರಿಗೂ ಇರಬೇಕು.


ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ನಾಗರಿಕತೆಯಲ್ಲಿ ಬಡವರಿಗೆ ಪುಟ್ಟ ಮನೆ ಕಟ್ಟಿ ಕೊಡುವ ಅವಕಾಶವನ್ನು ಸಮಾಜ ದೊಡ್ಡ ಪ್ರಮಾಣದಲ್ಲಿ ಮಾಡಬೇಕು. ಸರ್ಕಾರ ಈ ಕೆಲಸ ಮಾಡಬೇಕು ಎಂದರು.
5 ಲಕ್ಷ ಮನೆಗಳು ಅಂತಿಮ ಹಂತದಲ್ಲಿ


ಘೋಷಣೆಗಳು ಬಹಳಷ್ಟು ಆಗುತ್ತವೆ. ಅದಕ್ಕೆ ಹಣ ಮೀಸಲಿಡಬೇಕು. ಆರು ವರ್ಷಗಳ ಹಿಂದೆ 15 ಲಕ್ಷ ಮನೆ ಕಟ್ಟುವುದಾಗಿ ಘೋಷಣೆಯಾಯಿತು. ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. ಅದಕ್ಕೆ ಹಣ ಮೀಸಲಿಡದೇ ಹೋದರು. 15 ಸಾವಿರ ಕೋಟಿ ರೂ. ಅಗತ್ಯವಿದ್ದರೆ, 3 ಸಾವಿರ ಕೋಟಿ ಮೀಸಲಿಟ್ಟರು. ಅಗತ್ಯವಿರುವಷ್ಟು ಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದರು.


5 ಲಕ್ಷ ಮನೆಗಳ ನಿರ್ಮಾಣ
ಸೋಮಣ್ಣ ಅವರು ವಸತಿ ಸಚಿವ ರಾದ ನಂತರ ಗೃಹ ನಿರ್ಮಾಣ ಕ್ಕೆ ಒಂದು ರೂಪುರೇಷೆ ನೀಡಿ, ಬಾಕಿ ಇರುವ ಮನೆಗಳ ನಿರ್ಮಾಣ ವಾಗಬೇಕು. ಆಯ್ಕೆಯಾಗಿದ್ದ ಅನರ್ಹರನ್ನು ತೆಗೆಯಲು ವಿಶೇಷ ಸಾಫ್ಟವೇರ್ ಅಳವಡಿಸಿದ್ದರು. ಗ್ರಾಮೀಣ ಪ್ರದೇಶದ ಮನೆಗಳ ನಿರ್ಮಾಣಕ್ಕೆ ಕೈಗೊಂಡು ಈ ವರ್ಷ 5 ಲಕ್ಷ ಮನೆಗಳ ನಿರ್ಮಾಣ ಮಾಡಿ ಅಂತಿಮ ಹಂತಕ್ಕೆ ತಂದಿದ್ದಾರೆ.


ಯಲಹಂಕದಲ್ಲಿ ಒಟ್ಟು 900 ಮನೆ
ನಾನು ಮುಖ್ಯಮಂತ್ರಿಯಾದ ಬಳಿಕ ಸುಮಾರು 5 ಲಕ್ಷ ಮನೆಗಳ ಮಂಜೂರಾತಿ ಮಾಡಿದ್ದು, 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರದಲ್ಲಿ ಮಂಜೂರಾತಿ ನೀಡಿದ್ದು, ಫಲಾನುಭಾವಿಗಳ ಆಯ್ಕೆಯಾಗಿ ಪ್ರಗತಿಯಲ್ಲಿದೆ. ನಾವು ಹೇಳಿದಂತೆ ನಡೆಯುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಏಳು ವರ್ಷಗಳಿಂದ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ತರಾತುರಿಯಲ್ಲಿ ಘೋಷಣೆ ಮಾಡಲಾಗಿತ್ತು. ಜಮೀನು ಇದೆಯೋ ಇಲ್ಲವೋ ಎಂದು ಯೋಚಿಸಲಿಲ್ಲ. ಮನೆಗಳನ್ನು ನಾವು ಆಕಾಶದಲ್ಲಿ ಕಟ್ಟಲಾಗುವುದಿಲ್ಲ
ಭೂಮಿಯ ಮೇಲೆ ಕಟ್ಟಬೇಕು. ಆದರೆ ಭೂಮಿಯೇ ಇಲ್ಲದೇ ಮನೆ ಕಟ್ಟುತ್ತೇವೆ ಎಂದು ಚುನಾವಣಾ ಘೋಷಣೆ ಮಾಡಿದರು.ಇಂದಿಗೂ ನಾವು 50 ಸಾವಿರ ಮನೆಗಳಿಗೆ ಸ್ಥಳವನ್ನು 492 ಎಕರೆ ಭೂಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಪಡೆದು ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ.


ಮೊದಲ ಹಂತದ 20 ಸಾವಿರ ಮನೆಗಳನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಅದರಲ್ಲಿ 5 ಸಾವಿರ ಮನೆಗಳನ್ನು ಇಂದು ಹಂಚಿಕೆ ಮಾಡುತ್ತಿದ್ದು, ಯಲಹಂಕದಲ್ಲಿ ಒಟ್ಟು 900 ಮನೆಗಳನ್ನು ನೀಡಲಾಗುತ್ತಿದೆ. ಸುಮಾರು 5-6 ಕ್ಷೇತ್ರಗಳಲ್ಲಿ ಇಂದು ಮನೆಗಳ ಹಂಚಿಕೆಯಾಗುತ್ತಿದೆ. ಹಂತಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಇದೆ. ಕಲ್ಲಿನ ಕ್ವಾರಿಯ ಒಳಗೆ ಮನೆಗಳನ್ನು ಕಟ್ಟುವುದಾಗಿ ಜಾಗ ತೋರಿಸಿದ್ದರು. ಇಷ್ಟು ಅಪ್ರಮಾಣಿಕವಾಗಿ ನಾವು ನಡೆದುಕೊಂಡರೆ ಜನರು ಮೆಚ್ಚುತ್ತಾರಾ ? ಇರುವ ವಿಚಾರವನ್ನು ಇದ್ದಂತೆ ಹೇಳಿ ಅದಕ್ಕೆ ಪರಿಹಾರ ಪಡೆದು ಮುಂದೆ ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಕ್ರಮ ರೂಪದಲ್ಲಿ ನೀಡಲಾಗುತ್ತಿದೆ ಎಂದರು.


ವಸತಿ ಸಚಿವ ವಿ.ಸೋಮಣ್ಣ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ಶಾಸಕ ಸಿದ್ದು ಸವದಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ನಾಗರಾಜ್, ವಸತಿ ಇಲಾಖೆ ಕಾರ್ಯದರ್ಶಿ ಡಾ: ಜೆ.ರವಿಶಂಕರ್, ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version