Home ಟಾಪ್ ಸುದ್ದಿಗಳು ಕಾನೂನು-ಸುವ್ಯವಸ್ಥೆ: ಯೋಗಿ ಆದಿತ್ಯನಾಥ್’ಗೆ ಸವಾಲು ಹಾಕಿದ ಸಿದ್ದರಾಮಯ್ಯ

ಕಾನೂನು-ಸುವ್ಯವಸ್ಥೆ: ಯೋಗಿ ಆದಿತ್ಯನಾಥ್’ಗೆ ಸವಾಲು ಹಾಕಿದ ಸಿದ್ದರಾಮಯ್ಯ

ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರ ಮಾಡಲು ಬಂದಿದ್ದಾರೆ. ನಿನ್ನೆ ರಾಜ್ಯದ ಮಂಡ್ಯ ಮುಂತಾದ ಕಡೆ ಉತ್ತರ ಪ್ರದೇಶದ ಮಾದರಿಯ ಬಗ್ಗೆ ಮಾತನಾಡಿದ್ದಾರೆ. ಉತ್ತರ ಪ್ರದೇಶದ ಮಾದರಿ ಎಂದರೆ ಏನು ಎಂದು ಇಡೀ ಜಗತ್ತಿಗೆ ಗೊತ್ತಾಗಿದೆ. ಆದರೂ ಅದರ ಬಗ್ಗೆ ಕರ್ನಾಟಕದಲ್ಲೂ ಪ್ರಸ್ತಾಪಿಸುವುದು ಹಾಸ್ಯಾಸ್ಪದವಾದ ಸಂಗತಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


1.ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ ಉತ್ತರಪ್ರದೇಶದಲ್ಲಿ 6 ವರ್ಷದ ಒಳಗಿನ ಮಕ್ಕಳ ಅನಿಮಿಯಾ ಪ್ರಮಾಣ ಶೇ. 66.4 ರಷ್ಟಿದೆ. ಇದು 2016 ರಲ್ಲಿ ಶೇ.63.2 ರಷ್ಟಿತ್ತು. ಶೇ.3.2 ರಷ್ಟು ಅಪೌಷ್ಟಿಕತೆಯನ್ನು ಹೆಚ್ಚಿಸಿ ಮಕ್ಕಳನ್ನು ರೋಗಗ್ರಸ್ತ ಮಾಡಿದ್ದು ಯೋಗಿ ಆದಿತ್ಯ ನಾಥ್ ಅವರ ಸಾಧನೆ.
2.2016ರಲ್ಲಿ ಉತ್ತರ ಪ್ರದೇಶದ ಮಹಿಳೆಯರ ಸರಾಸರಿ ಜೀವಿತಾವಧಿ 68.5 ರಷ್ಟಿತ್ತು. 2019 ರಲ್ಲಿ ಅದು ಶೇ.66.2 ಕ್ಕೆ ಕುಸಿದಿದೆ. ಎಲ್ಲ ರಾಜ್ಯಗಳ ಜನರ ಜೀವಿತಾವಧಿ ಹೆಚ್ಚುತ್ತಿದ್ದರೆ ಉತ್ತರ ಪ್ರದೇಶದಲ್ಲಿ ಕುಸಿಯುತ್ತಿದೆ. ಇದೇ ಅಲ್ಲವೆ ಆದಿತ್ಯನಾಥ್ ಮಾದರಿ.


3.ತಲಾವಾರು ವಿದ್ಯುತ್ ಲಭ್ಯತೆಯು ಕರ್ನಾಟಕದಲ್ಲಿ 1184 ಕಿಲೋವ್ಯಾಟ್ಗದಳಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಕೇವಲ 642 ಕಿಲೋವ್ಯಾಟ್ಗವಳಷ್ಟಿದೆ. ಆದಿತ್ಯನಾಥರು ಮುಖ್ಯಮಂತ್ರಿಗಳಾದ ಮೇಲೆ ಗಮನಾರ್ಹ ಬದಲಾವಣೆಯೇನೂ ಸಂಭವಿಸಿಲ್ಲ. ಅಭಿವೃದ್ಧಿಗೂ ವಿದ್ಯುತ್ ಬಳಕೆಗೂ ಸಂಬಂಧವಿದೆ.
4.2021 ರ ದಾಖಲೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 3012 ತಜ್ಞ ವೈದ್ಯರುಗಳ ಹುದ್ದೆಗಳು ಮಂಜೂರಾಗಿದ್ದರೆ, ಕೆಲಸ ಮಾಡುತ್ತಿರುವವರು ಕೇವಲ 872 ಜನ ಮಾತ್ರ. 2030 ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಬೇಕಾದ ವೈದ್ಯರುಗಳ 1355 ಹುದ್ದೆಗಳು ಖಾಲಿ ಇವೆ. ಜನರ ಆರೋಗ್ಯ ಸುಧಾರಿಸದೆ ರಾಜ್ಯವನ್ನು ಅಭಿವೃದ್ಧಿ ಮಾಡುವುದು ಹೇಗೆ?
5.ಉತ್ತರ ಪ್ರದೇಶದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ ಮತ್ತು ರೈತರು ಮುಂತಾದ ದಮನಿತ ವರ್ಗಗಳು ಬದುಕಲಾಗದಷ್ಟು ಪರಿಸ್ಥಿತಿ ಹಾಳಾಗಿದೆಯೆಂಬ ಮಾಹಿತಿ ಇದೆ. ಶತಮಾನಗಳಿಂದ ದಮನಿಸಲ್ಪಟ್ಟ ಜನರನ್ನು ಬಾಬಾಸಾಹೇಬರ ಆಶಯಗಳು, ಮಚ್ಚೇಂದ್ರನಾಥ್, ಗೋರಖ್ನಾೆಥರ, ಕಬೀರರ ಆಶಯಗಳಿಗೆ ವಿರುದ್ಧವಾಗಿ ದಮನಿಸಿ ನಾಶ ಮಾಡುವುದೆ ಉತ್ತರ ಪ್ರದೇಶ ಮಾದರಿಯೆಂಬುದನ್ನು ಆದಿತ್ಯನಾಥರು ಸಾಬೀತು ಮಾಡಿದ್ದಾರೆ. ಇದನ್ನು ಉತ್ತರ ಪ್ರದೇಶದ ಮಾದರಿ ಎನ್ನುವುದಕ್ಕಿಂತ ಆದಿತ್ಯನಾಥ್ ಮಾದರಿ ಎನ್ನಬೇಕಾಗುತ್ತದೆ. ಇಂಥ ಮಾದರಿಯನ್ನು ಕರ್ನಾಟಕದಲ್ಲಿ ಬಿತ್ತಲು ರಾಜ್ಯದ ಜನರು ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಇಲ್ಲಿ ಬಸವಣ್ಣನವರು, ಕನಕದಾಸರು, ಶ್ರೀ ನಾರಾಯಣ ಗುರುಗಳು, ಮಹಾಕವಿ ಕುವೆಂಪು ಅವರು, ಬಾಬಾಸಾಹೇಬರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ದೇವರಾಜ ಅರಸು ಅವರಂಥ ಧೀಮಂತರ ಮಹಾನ್ ಮಾದರಿಗಳು ಕರ್ನಾಟಕದಲ್ಲಿದೆ. ಅವುಗಳನ್ನು ಬೇಕಿದ್ದರೆ ಆದಿತ್ಯನಾಥರು ಕಲಿತುಕೊಂಡು ಹೋಗಿ ಅಲ್ಲಿ ಅಳವಡಿಸಿಕೊಳ್ಳಲಿ. ಆಗಲಾದರೂ ಅಲ್ಲಿನ ದಮನಿತರಾದ ನನ್ನ ಸೋದರ ಜಾತಿ-ಜನಾಂಗಗಳ ಜನರು ತುಸು ನೆಮ್ಮದಿಯಾಗಿ ಊಟ ಮಾಡಿ, ದುಡಿಮೆ ಮಾಡಿ ಜೀವಿಸಲಿ.


6.ಯೋಗಿ ಆದಿತ್ಯನಾಥರೆ ನೀವು ಯಾವ ಮುಖ ಹೊತ್ತು ರಾಜ್ಯದಲ್ಲಿ ಮತ ಕೇಳುತ್ತೀರಿ ಹೇಳಿ? ನಿಮ್ಮ ಅಂದಾದುಂದಿ ಆಡಳಿತ ನಡೆಸುವುದಕ್ಕಾಗಿ ದಕ್ಷಿಣದ ರಾಜ್ಯಗಳ ಜನರ ಜೀವ ಹಿಂಡಿ ಮೋದಿ ಸರ್ಕಾರ ನಿಮಗೆ ಅನುದಾನಗಳನ್ನು ಕೊಡುತ್ತಿದೆ. ನಿಮ್ಮ ರಾಜ್ಯದ ಬಜೆಟ್’ನ ಶೇ.50 ರಷ್ಟು ಅನುದಾನವನ್ನು ಮೋದಿ ಸರ್ಕಾರ ಕೊಡುತ್ತಿದೆ. ಆದರೆ ಕರ್ನಾಟಕಕ್ಕೆ ಕೇವಲ ಶೇ. 16.25 ರಷ್ಟನ್ನು ಮಾತ್ರ ಕೊಡುತ್ತಿದೆ.
7.ಉತ್ತರ ಪ್ರದೇಶದ 2023-24ರ ಬಜೆಟ್ ಗಾತ್ರ 6.9 ಲಕ್ಷ ಕೋಟಿ ರೂ. ಅದರಲ್ಲಿ ತೆರಿಗೆ ಪಾಲು 183238 ಕೋಟಿ ರೂಪಾಯಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ 114213 ಕೋಟಿ ರೂಪಾಯಿಗಳು ಎರಡೂ ಸೇರಿ 297451 ಕೋಟಿ ರೂಪಾಯಿಗಳನ್ನು ಉತ್ತರ ಪ್ರದೇಶವು ಕೇಂದ್ರದಿಂದ ಪಡೆಯುತ್ತಿದೆ. ಇದರಲ್ಲಿ ಹಣಕಾಸು ಆಯೋಗದ ನೇರ ಅನುದಾನಗಳು ಸೇರಿಲ್ಲ. ಸೇರಿದರೆ ಶೇ.50 ಅನ್ನೂ ಮೀರುತ್ತದೆ. ಉತ್ತರ ಪ್ರದೇಶದಲ್ಲಿ ಈ ವರ್ಷ ಜಿಎಸ್ಟಿಕ ಮತ್ತು ಆದಾಯ ತೆರಿಗೆಗಳಿಂದ ಸಂಗ್ರಹವಾಗುವ ಅಂದಾಜು ಮೊತ್ತ 1.34 ಲಕ್ಷ ಕೋಟಿ ರೂಪಾಯಿಗಳು.
8.ಕರ್ನಾಟಕದ ಜನರಿಂದ ಮೋದಿ ಸರ್ಕಾರ ಜಿಎಸ್’ಟಿ ಮತ್ತು ನೇರ ತೆರಿಗೆಗಳಿಂದ ಈ ವರ್ಷ 3.72 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯ ಸಂಗ್ರಹಿಸುತ್ತದೆ. ಆದರೆ ನಮ್ಮ ರಾಜ್ಯಕ್ಕೆ ಸಿಗುವ ತೆರಿಗೆ ಪಾಲು 37 ಸಾವಿರ ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಿಗುವ ಪಾಲು 13 ಸಾವಿರ ಕೋಟಿ ರೂ. ಎರಡೂ ಸೇರಿದರೆ 50 ಸಾವಿರ ಕೋಟಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಣವೂ ಪೂರ್ಣ ಪ್ರಮಾಣದಲ್ಲಿ ಬರುವುದು ಅನುಮಾನ. 1.34 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ 3 ಲಕ್ಷ ಕೋಟಿಗೂ ಹೆಚ್ಚು ಅನುದಾನ ಪಡೆಯುವ ಉತ್ತರ ಪ್ರದೇಶವೆಲ್ಲಿ? 3.72 ಲಕ್ಷ ಕೋಟಿ ತೆರಿಗೆ ಪಾವತಿಸಿ 50 ಸಾವಿರ ಕೋಟಿ ರೂ ಪಾಲು ಪಡೆಯುವ ಕರ್ನಾಟಕವೆಲ್ಲಿ?
9.ಕೇಂದ್ರದಿಂದ ಇನ್ನೂ ಹೆಚ್ಚು ಅನುದಾನ ತೆಗೆದುಕೊಳ್ಳಿ ಅಡ್ಡಿಯಿಲ್ಲ. ತೆಗೆದುಕೊಂಡು ದಮನಿತ ಜಾತಿ ಸಮುದಾಯಗಳನ್ನು ಅಭಿವೃದ್ಧಿ ಮಾಡಿ ನಾನು ಸಂತೋಷ ಪಡುತ್ತೇನೆ. ಆದರೆ ಕೇಂದ್ರ ಉಳಿಸಿಕೊಳ್ಳುವ ಯಥೇಚ್ಛ ಸಂಪನ್ಮೂಲಗಳಲ್ಲಿ ನಮಗೆ ವಿಶೇಷ ಅನುದಾನಗಳನ್ನು ಕೊಡಿ, ಕರ್ನಾಟಕ ಮುಂತಾದ ದಕ್ಷಿಣದ ರಾಜ್ಯಗಳ ಕಾಮಧೇನುವಿನಂಥ ಕೆಚ್ಚಲು ಕೊಯ್ದು ನಮಗೆ ಪಾಲು ಕೊಡುವುದು ಬೇಡ ಎಂದು ನರೇಂದ್ರಮೋದಿಯವರಿಗೆ ನೀವು ಪತ್ರ ಬರೆದೊ ಇಲ್ಲ ಮನವಿ ಮಾಡಿಯೊ ಒತ್ತಾಯಿಸಿದ್ದರೆ, ನಿಮಗೆ ಕರ್ನಾಟಕಕ್ಕೆ ಬಂದು ಮತ ಕೇಳುವ ನೈತಿಕತೆ ಇರುತ್ತಿತ್ತು. ಈಗ ನಿಮ್ಮಲ್ಲಿ ಆ ನೈತಿಕತೆ ಉಳಿದಿಲ್ಲ. ಹಾಗಿದ್ದರೂ ಯಾವ ಮುಖ ಹೊತ್ತು ಮತ ಕೇಳುತ್ತೀರಿ?


10.ನೀವು ರಾಜ್ಯದಲ್ಲಿ ಹಲವು ಸುಳ್ಳು ಹೇಳಿದ್ದೀರಿ. ಸುಳ್ಳು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನೀವು ಹೇಳಿದ ಸುಳ್ಳುಗಳಲ್ಲಿ ಪಿಎಫ್’ಐ ವಿಚಾರವೂ ಸೇರಿದೆ. ಕರ್ನಾಟಕದಲ್ಲಿ ಪಿಎಫ್’ಐ ಮತ್ತು ಎಸ್’ಡಿಪಿಐ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ಬಿಜೆಪಿ ಸರ್ಕಾರವೆ ಹಿಂಪಡೆದಿದೆ ಎಂದು ಬೊಮ್ಮಾಯಿ ಸರ್ಕಾರವೆ ನನಗೆ ಮಾಹಿತಿ ನೀಡಿದೆ. ಉತ್ತರ ಕರ್ನಾಟಕದ ಹೊನ್ನಾವರದಲ್ಲಿ ದಾಖಲಾಗಿದ್ದ ಸಿಸಿ.ನಂ.483/2019 ಕ್ಕೆ ಸಂಬಂಧಿಸಿದ ಪ್ರಕರಣವನ್ನು ದಿನಾಂಕ 13-10-2020 ರಂದು ರಾಜ್ಯ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿದೆ. ಇದಕ್ಕೆ ಏನು ಹೇಳುತ್ತೀರಿ ಯೋಗಿ ಆದಿತ್ಯನಾಥ್ ಅವರೆ? ನೀವು ಸುಳ್ಳು ಹೇಳುತ್ತಾ ಹೋಗಿ. ನಾವು ಸತ್ಯವೇನೆಂದು ನಿಮ್ಮ ಮುಖದ ಮುಂದೆ ಇಡುತ್ತೇವೆ. ಯಾರು ಸರಿ ಎಂದು ಜನರೆ ತೀರ್ಮಾನಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Join Whatsapp
Exit mobile version