ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರಕಾರದ ನೂತನ ‘ಯುಪಿ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ 2020’ ಸುಗ್ರೀವಾಜ್ಞೆಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅಂಕಿತ ಹಾಕಿದ್ದಾರೆ. ಬಲವಂತದ ಮತಾಂತರದ ವಿರುದ್ಧ ಎನ್ನಲಾದ ಈ ಕಾನೂನು ದೇಶಾದ್ಯಂತ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ಅಪಪ್ರಚಾರ ಸಿದ್ಧಾಂತದ ‘ಲವ್ ಜಿಹಾದ್’ ಕುರಿತಾದುದು ಎನ್ನಲಾಗಿದೆ. ಆದರೆ, ನೂತನ ಕಾನೂನಿನ ಹೆಸರಲ್ಲಿ ತಮ್ಮ ದ್ವೇಷ ಸಿದ್ಧಾಂತದ ‘ಲವ್ ಜಿಹಾದ್’ ಪದ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿವಾಹದ ಉದ್ದೇಶಕ್ಕಾಗಿ ಧಾರ್ಮಿಕ ಮತಾಂತರ ತಡೆಯುವ ಉದ್ದೇಶದಿಂದ ಕಠಿಣ ಕಾನೂನು ಜಾರಿಗೊಳಿಸಲು ಉತ್ತರ ಪ್ರದೇಶ ಸರಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ಮಂಗಳವಾರ ಒಪ್ಪಿಗೆ ಸೂಚಿಸಿತ್ತು.
ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಹಲವು ವರ್ಷಗಳಿಂದ ‘ಲವ್ ಜಿಹಾದ್’ ಕುರಿತ ಕಟ್ಟುಕತೆಗಳನ್ನು ಹೆಣೆದು, ದ್ವೇಷ ರಾಜಕಾರಣ ಮಾಡಿಕೊಂಡು ಬಂದಿವೆ. ಇದಕ್ಕೆ ಬಿಜೆಪಿ ಬೆಂಬಲಿಗ ಮುಖ್ಯವಾಹಿನಿ ಮಾಧ್ಯಮಗಳೂ ಸಾಕಷ್ಟು ಕೊಡುಗೆಗಳನ್ನೂ ಕೊಟ್ಟಿವೆ. ಆದರೆ, ‘ಲವ್ ಜಿಹಾದ್’ ಪದ ಬಳಸಿ ಕಾನೂನು ರಚಿಸಲಾಗಿಲ್ಲ ಎನ್ನುವುದು ಗಮನಾರ್ಹ ಅಂಶವಾಗಿದೆ. ಮತಾಂತರ ನಿಷೇಧ ಕಾನೂನು ಈಗಾಗಲೇ ಇದ್ದಿದ್ದೆ. ಬಲವಂತದ ಮತಾಂತರಕ್ಕೆ ಈ ಹಿಂದೆಯೂ ಅವಕಾಶವಿರಲಿಲ್ಲ.