ಮಂಗಳೂರು: ಅಮಾಯಕರ ಬಂಧನ ವಿರೋಧಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮತ್ತು ಸಾರ್ವಜನಿಕರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅನ್ನು ಪ್ರಗತಿಪರರು, ಸಾಮಾಜಿಕ ಸಂಘಟನೆಗಳು, ವಕೀಲರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಈ ಬಗ್ಗೆ ಸಿಟಿಜನ್ಸ್ ಫೋರಂ ಫಾರ್ ಮಂಗಳೂರು ಡೆವಲಪ್ ಮೆಂಟ್, ವಿ ದಿ ವುಮೆನ್ ಮಂಗಳೂರು, ಬಹುತ್ವ ಕರ್ನಾಟಕ, ಹೇಟ್ ಸ್ಪೀಚ್ ಬೇಡ, ಡಿಫೆಂಡ್ ಡೆಮಾಕ್ರಸಿ ಕರ್ನಾಟಕ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್, ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಹೇಳಿಕೆ ಬಿಡುಗಡೆ ಮಾಡಿ ಪೊಲೀಸರ ದೌರ್ಜನ್ಯವನ್ನು ಕಠಿಣ ಶಬ್ಧಗಳಿಂದ ಖಂಡಿಸಿವೆ.
ಪತ್ರಿಕಾ ಹೇಳಿಕೆಯ ಸಾರಾಂಶ
14 ಡಿಸೆಂಬರ್ 2021ರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೋಲಿಸರು ಕ್ರೂರವಾಗಿ ದೌರ್ಜನ್ಯ ನಡೆಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕಾನೂನು ಬಾಹಿರವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ನಾಯಕರುಗಳನ್ನು ಬಂಧಿಸಲಾಗಿದೆ ಎಂದು ತಿಳಿದು, ಮಹಿಳೆಯರು ಮತ್ತು ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸದಸ್ಯರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಪ್ರತಿಭಟನೆ ಮಾಡುತ್ತಿದ್ದರು ಎಂದು ವರದಿಯಾಗಿದೆ. ಈ ಪ್ರತಿಭಟನೆಯು ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯುತ್ತಿತ್ತು ಎಂದು ಎಲ್ಲಾ ವರದಿಗಳು ಹೇಳುತ್ತವೆ.
ಪೊಲೀಸರು ನಡೆಸಿದ ಲಾಠಿ ಚಾರ್ಜ್ ಕ್ರೂರವಾಗಿತ್ತು ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂಬ ಸಂಗತಿಯು ವೀಡಿಯೂಗಳಿಂದ ತಿಳಿದು ಬರುತ್ತದೆ. ಹಲವಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಮತ್ತು ಇಬ್ಬರಿಗೆ ಐಸಿಯುನಲ್ಲಿ ದಾಖಲಾಗುವ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ವರದಿಯಾಗಿದೆ. ಆಂಬುಲೆನ್ಸ್ ನಲ್ಲಿದ್ದ ಜನರನ್ನು ಸಹ ಬಿಡದ ಅಟ್ಟಾಡಿಸಿಕೊಂಡು ಸಂಗತಿಯು ವಿಡಿಯೋಗಳ ಮೂಲಕ ತಿಳಿದು ಬರುತ್ತದೆ.
ಪೊಲೀಸರಿಗೆ ಜನರ ಗುಂಪನ್ನು ಚದುರಿಸಲು ನೀಡಿರುವ ಅಧಿಕಾರವ್ಯಾಪ್ತಿಯನ್ನು ಮೀರಿ ಪ್ರತಿಭಟನಕಾರರ ಮೇಲೆ ಹಿಂಸಾಚಾರ ನಡೆಸಿರುವುದು ಕಾನೂನಿನ ಸಂಪೂರ್ಣ ಉಲಂಘನೆಯಾಗಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಯಾವುದೇ ಸಮಗ್ರವಾದ ಮತ್ತು ಪರಿಣಾಮಕಾರಿಯಾದ ಯೋಜನೆಯನ್ನು ಸಿದ್ಧಪಡಿಸಿಕೊಳ್ಳದೆ ಪೊಲೀಸರು ಹಿಂಸಾಚಾರದ ಮಾರ್ಗವನ್ನು ಅನುಸರಿಸಿದ್ದಾರೆ ಎಂಬುವುದು ಗಮನಿಸಬೇಕಾದ ಸಂಗತಿ, ಅನಿತಾ ಠಾಕೂರ್ ವಿರುದ್ಧ ಸ್ಟೇಟ್ ಆಫ್ ಜೆ & ಕೆ (2016) 15 ಎಸ್ಸಿಸಿ 525) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಜನರ ಗುಂಪನ್ನು ಚದುರಿಸಲು ಪೊಲೀಸರು ಅತಿಯಾದ ಬಲಪ್ರಯೋಗ ಮಾಡುವುದು ವ್ಯಕ್ತಿಗಳ ಘನತೆಯ ಮೇಲಿನ ಆಕ್ರಮಣವೆಂದು ಹೇಳಿದೆ.
ಲಾಠಿ ಚಾರ್ಜ್ ನಂತಹ ಅತಿಯಾದ ಬಲಪ್ರಯೋಗಕ್ಕೆ ಪೊಲೀಸರನ್ನು ತಕ್ಷಣವೇ ಹೊಣೆಗಾರರನ್ನಾಗಿ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರದ ಬಳಕೆಯ ಬಗ್ಗೆ ನ್ಯಾಯಾಂಗ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಎಫ್ಐಆರ್ ದಾಖಲಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಕರ್ನಾಟಕ ಸರ್ಕಾರವು ಸಂತ್ರಸ್ತ ಪರಿಹಾರ ಯೋಜನೆಯ ಮೂಲಕ ಗಾಯಗೊಂಡ ಪ್ರತಿಭಟನಾಕಾರರ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಬೇಕೆಂದು ಮತ್ತು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮುವಾದ ಪ್ರಚೋದಿತ ಗಲಭೆಗಳನ್ನು ಗಂಭೀರವಾಗಿ ಗಮನಿಸಬೇಕಾಗಿದೆ ಮತ್ತು ಆ ಘಟನೆಗಳಲ್ಲಿ ಪೊಲೀಸರ ಸಹಭಾಗಿತ್ವದ ಪಾತ್ರವನ್ನು ನಿರ್ಲಕ್ಷಿಸಬಾರದು. ಈ ಜಿಲ್ಲೆಯಲ್ಲಿ ಪೊಲೀಸರು ಪ್ರದರ್ಶಿಸುತ್ತಿರುವ ಅತಿರೇಕಗಳನ್ನು ತಡೆಯುವುದಕ್ಕಾಗಿ ಸಾಂವಿಧಾನಿಕ ಮತ್ತು ಕರ್ನಾಟಕದ ಬಹುತ್ವದ ಮೌಲ್ಯಗಳನ್ನು ಪುನಶ್ಚತನಗೊಳಿಸಲು ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಪೊಲೀಸರಿಗೆ ತರಬೇತಿಯನ್ನು ಪ್ರಾರಂಭಿಸಬೇಕು.