ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ NEP ಯನ್ನು ವಿರೋಧಿಸಿ ಮತ್ತು ಈ ಬಗ್ಗೆ ವಿಸ್ತೃತ ಚರ್ಚೆಯಾಗಬೇಕೆಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಸಂದರ್ಭ ಪೊಲೀಸರು ವಿದ್ಯಾರ್ಥಿಗಳನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಈ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಇದು ಉತ್ತರ ಪ್ರದೇಶ ಅಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಪ್ರಸ್ತುತ ನ್ಯೂಸ್ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರಕಾರ NEP ಯನ್ನು ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಯಾವುದೇ ಚರ್ಚೆ ಮಾಡದೆ ಜಾರಿಗೆ ತಂದಿದೆ. ಕೋವಿಡ್ ಇದ್ದಂತಹ ಸಂದರ್ಭದಲ್ಲಿ ಈ ಕಾಯ್ದೆಯನ್ನು ಪಾಸ್ ಮಾಡಿದ್ದಾರೆ. ಈ ನೂತನ ಶಿಕ್ಷಣ ನೀತಿಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಧ್ವಂಸ ಮಾಡುವ ಆತಂಕವಿದೆ. ಯಾಕೆಂದರೆ ಅಚ್ಛೇ ದಿನ ಬರುತ್ತದೆ ಎಂದು ಹೇಳಿದ ಮೋದಿಯು, ಇಂದು ರೈತರು, ಸಾಮಾನ್ಯ ಜನ, ಕಾರ್ಮಿಕರು ನೇಣು ಹಾಕಿಕೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಇದು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಅಲ್ಲ. ಇಲ್ಲಿ ಪ್ರಜ್ಞಾವಂತರಿದ್ದಾರೆ. ಶಿಕ್ಷಿತರಿದ್ದಾರೆ. ಜಾರಿಗೆ ತಂದಿರುವುದರಲ್ಲಿ ದೇಶದಲ್ಲೇ ಮೊದಲ ರಾಜ್ಯ ಎಂದು ಹೇಳಿ ಜಾರಿಗೆ ತಂದಿರುವ ಶಿಕ್ಷಣ ಸಚಿವರದ್ದು ಸರಿಯಾದ ನಿರ್ಧಾರವಲ್ಲ. ಏಕಮುಖವಾಗಿ NEP ಯನ್ನು ಜಾರಿ ಮಾಡಲು ಹೊರಟಿರುವುದು ಕರ್ನಾಟಕದ ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿ ಆಳ ನೋಡುವ ಪ್ರಕ್ರಿಯೆ ಇದಾಗುತ್ತದೆ. ಯಾವ ಕಾರಣಕ್ಕೂ NEP ಯನ್ಙು ಜಾರಿ ಮಾಡಬಾರದು. ಒಂದು ವರ್ಷ ಮುಂದೂಡಿ ವಿಸ್ತೃತವಾದ ಚರ್ಚೆ ನಡೆಯಲಿ ಮತ್ತು ಅದರ ಸಾಧಕ ಬಾದಕದ ಬಗ್ಗೆ ಚರ್ಚೆಯಾದ ಬಳಿಕ ಜಾರಿಯಾದರೆ ಮಾತ್ರ ಸೂಕ್ತ ಎಂದು ಅವರು ಹೇಳಿದರು.
ಇದೀಗ ಜಾರಿ ಮಾಡುವುದರ ಹಿಂದೆ ಶಿಕ್ಷಣದಲ್ಲಿ ಕೇಸರೀಕರಣ ಮಾತ್ರವಲ್ಲದೆ ಜಾತ್ಯತೀತ ರಾಷ್ಟ್ರವಾದ ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡುವಂತಹ ಕೆಟ್ಟ ಕುತಂತ್ರವೂ ಇದರ ಹಿಂದೆ ಅಡಗಿದೆ. ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡುವ ಈ ನಡೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಶಿಕ್ಷಣ ವ್ಯವಸ್ಥೆ ಕೂಡ ಅದರ ಹುನ್ನಾರದಲ್ಲೇ ಜಾರಿಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದಾರೆ. ಇವತ್ತು ಹೆಣ್ಣು ಮಕ್ಕಳ ಅತ್ಯಾಚಾರ ಆಗುವುದನ್ನು ತಡೆಯುವ ಯೋಗ್ಯತೆಯಿಲ್ಲ. ಸಣ್ಣ ಸಣ್ಣ ಮಕ್ಕಳ ಮೇಲೆ ದೌರ್ಜನ್ಯ ಮಿತಿಮೀರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆ ಅವರಿಗಿಲ್ಲ. ಪ್ರತಿಭಟನೆ ನಡೆಸುವವರ ಮೇಲೆ ಲಾಠಿಚಾರ್ಜ್, ಹಲ್ಲೆ, ದಾಳಿ ಮಾಡುತ್ತಿರುವುದು ನಾಚಿಗೆಗೇಡಿನ ವಿಷಯ. ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅವರು ನಾಲಾಯಕ್ಕು. ಮುಖ್ಯಮಂತ್ತಿಯವರು ಈ ಕೂಡಲೇ ಗೃಹ ಖಾತೆಯನ್ನು ಬೇರೆಯವರಿಗೆ ನೀಡಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.