ಉತ್ತರಾಖಂಡ: ಪಿಥೋರಗಡ ಜಿಲ್ಲೆಯ ಜುಮ್ಮಾಹಳ್ಳಿ ಬಳಿ ಸಂಭವಿಸಿದ ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದು, ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ತಂಡದ ಸದಸ್ಯರು ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಮನೆಗಳು ಕುಸಿದ ಸ್ಥಳದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.
ಈ ಕುರಿತು ಮಾಹಿತಿ ನೀಡಿರುವ ಪಿಥೋರಘರ್ ಡಿಎಂ ಆಶೀಶ್ ಚೌಹಾಣ್, ಈಗಾಗಲೇ ಎಸ್ ಡಿ ಆರ್ ಎಫ್ ಮತ್ತು ಎಸ್ ಎಸ್ ಬಿ ತಂಡಗಳನ್ನು ಜುಮ್ಮಾ ಗ್ರಾಮಕ್ಕೆ ಕಳುಹಿಸಲಾಗಿದೆ. ಐವರು ಅವಶೇಷದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದಿದ್ದಾರೆ.