ಕರವತ್ತಿ: ಬಹುಪಾಲು ಇಸ್ಲಾಂ ಧರ್ಮೀಯರೇ ವಾಸವಾಗಿರುವ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಶಾಲಾ ಕಾಲೇಜುಗಳ ವಾರದ ರಜೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರಸ್ತುತ ಶುಕ್ರವಾರದ ರಜಾದಿನವನ್ನು ರದ್ದುಗೊಳಿಸಿ ಲಕ್ಷದ್ವೀಪ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶುಕ್ರವಾರದ ಬದಲು ದೇಶದ ಇತರ ಭಾಗಗಳಲ್ಲಿರುವಂತೆ ಭಾನುವಾರ ರಜಾ ದಿನವನ್ನಾಗಿ ಬದಲಾಯಿಸಲಾಗಿದೆ.
ಲಕ್ಷದ್ವೀಪದಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಶುಕ್ರವಾರದಂದು ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತಿತ್ತು. ಇದೀಗ ಈ ಸಂಪ್ರದಾಯ ಅಂತ್ಯವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಬದಲಾದ ನಿಯಮ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಧಿಕಾರಿಗಳ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಜಾರಿಗೊಳಿಸುವಾಗ ದ್ವೀಪ ನಿವಾಸಿಗಳೊಂದಿಗೆ ಆ ಕುರಿತು ಚರ್ಚಿಸಬೇಕು. ಆದರೆ ಯಾವುದೇ ಶಾಲಾ ಆಡಳಿತ ಮಂಡಳಿಗಳ ಜೊತೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಝಲ್, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಕೋರಿ, ಲಕ್ಷದ್ವೀಪ ಜಿಲ್ಲಾ ಪಂಚಾಯತ್’ನ ಉಪಾಧ್ಯಕ್ಷ ಪಿಪಿ ಅಬ್ಬಾಸ್, ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್’ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಫುಲ್ ಖೋಡಾ ಪಟೇಲ್ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕವಾದ ಬಳಿಕ ಸ್ಥಳೀಯ ಸಂಪ್ರದಾಯಗಳಿಗೆ ಹಾಗೂ ದ್ವೀಪದ ನಿವಾಸಿಗಳ ಇಚ್ಛೆಗೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ಈ ಹಿಂದೆ ಕೂಡ ತಾವು ತೆಗೆದುಕೊಂಡ ನಿರ್ಧಾರಗಳಿಂದ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಅವರನ್ನು ವಾಪಸ್ ಕರೆಸಬೇಕು ಎನ್ನುವ ಆಗ್ರಹ ಬಲವಾಗಿ ಕೇಳಿ ಬಂದಿತ್ತು.