Home ಟಾಪ್ ಸುದ್ದಿಗಳು ಲಖಿಂಪುರದಲ್ಲಿ ರೈತರ ಹತ್ಯೆ: ಕೇಂದ್ರ ಸಚಿವರ ವಜಾಕ್ಕೆ ಒತ್ತಾಯಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ

ಲಖಿಂಪುರದಲ್ಲಿ ರೈತರ ಹತ್ಯೆ: ಕೇಂದ್ರ ಸಚಿವರ ವಜಾಕ್ಕೆ ಒತ್ತಾಯಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ

ಲಕ್ನೋ: ಲಖಿಂಪುರ ಹಿಂಸಾಚಾರದಲ್ಲಿ ರೈತರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಲೋಕಸಭೆಯಲ್ಲಿ ಬುಧವಾರ ವಿವಿಧ ಪ್ರತಿಪಕ್ಷಗಳ ಸಂಸದರು ಒಕ್ಕೊರಲಿನಿಂದ ಒತ್ತಾಯಿಸಿ ಧರಣಿ ನಡೆಸಿದ್ದು, ಗದ್ದಲ, ಕೋಲಾಹಲ ಉಂಟಾದ್ದರಿಂದ ಅಧಿವೇಶವನ್ನು ಗುರುವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.

ಲಖಿಂಪುರ ಹಿಂಸಾಚಾರದಲ್ಲಿ ರೈತರ ಹತ್ಯೆಯಲ್ಲಿ ಸಚಿವರ ಪುತ್ರ ಶಾಮೀಲಾಗಿದ್ದಾರೆ ಮತ್ತು ಹತ್ಯೆ ಪೂರ್ವಯೋಜಿತ ಎಂದು ವಿಶೇಷ ತನಿಖಾ ತಂಡ ವರದಿ ಆಧರಿಸಿ ಪ್ರತಿಪಕ್ಷಗಳು ಧರಣಿಗೆ ಇಳಿದಿವು.

ಲಖಿಂಪುರ ಹಿಂಸಾಚಾರದ ಕುರಿತು ಎಸ್.ಐ.ಟಿ ಯ ವರದಿಯನ್ನು ಆಧರಿಸಿ ತುರ್ತು ಪ್ರಾಮುಖ್ಯತೆಯ ವಿಷಯವನ್ನು ಚರ್ಚಿಸಲು ಕಲಾಪವನ್ನು ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಧಿವೇಶನದಲ್ಲಿ ಒತ್ತಾಯಿಸಿದರು. ಮಾತ್ರವಲ್ಲ ಮಿಶ್ರಾ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.

ಲಖಿಂಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಆಶಿಶ್ ಮಿಶ್ರಾ ಮತ್ತು ಇತರ 12 ಮಂದಿಯ ವಿರುದ್ಧ ಕೊಲೆ, ಕೊಲೆಯತ್ನ ಮತ್ತು ಇತರ ಕ್ರಿಮಿನಲ್ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 307, 326, 34 ರ ಅನ್ವಯ ಪ್ರಕರಣ ದಾಖಲಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ 13 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ನೀಡಿದ್ದು, ಎಸ್.ಐ.ಟಿ ಅರ್ಜಿಯ ಕುರಿತ ವಿಚಾರಣೆ ನಡೆಯಬೇಕಿದೆ.

Join Whatsapp
Exit mobile version