Home ಟಾಪ್ ಸುದ್ದಿಗಳು ಸಮರ್ಪಕ ರಸ್ತೆ ಸೌಲಭ್ಯ ಕೊರತೆ; ಗರ್ಭಿಣಿಯನ್ನು ಕುರ್ಚಿಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಸಮರ್ಪಕ ರಸ್ತೆ ಸೌಲಭ್ಯ ಕೊರತೆ; ಗರ್ಭಿಣಿಯನ್ನು ಕುರ್ಚಿಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಕಳಸ: ಬಾಣಂತಿಯೊಬ್ಬರನ್ನು ಕುರ್ಚಿಯಲ್ಲಿ ಕೂರಿಸಿ, ‌ಹೊತ್ತುಕೊಂಡು ಮನೆಗೆ ತಲುಪಿಸಿದ ಘಟನೆ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್ ನಲ್ಲಿ ನಡೆದಿದೆ.

ಸಂಸೆ ಗ್ರಾಮ ವ್ಯಾಪ್ತಿಯ ಬಿಳಗಲ್ ಪ್ರದೇಶದಲ್ಲಿ 35 ಗಿರಿಜನರ  ಕುಟುಂಬಗಳು ವಾಸಿಸುತ್ತಿದ್ದು, ತಮ್ಮ ಗ್ರಾಮ ತಲುಪಲು ಸಮರ್ಪಕ ರಸ್ತೆ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ.

ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಕಾರ್ಯಾರಂಭ ಮಾಡಿದಾಗ ಲಕ್ಯಾದಿಂದ ಸ್ಥಳಾಂತರಗೊಂಡ ಕೆಲವು ಕುಟುಂಬಗಳು ಈ ಪ್ರದೇಶದಲ್ಲಿ ನೆಲೆಸುತ್ತಿವೆ. ಆದರೆ ಈ ಕುಟುಂಬಗಳು ಮಳೆಗಾಲದ 5 ತಿಂಗಳು ತಮ್ಮ ಊರು ತಲುಪಲು ತುಂಬಾ ಕಷ್ಟಪಡಬೇಕಾಗಿದೆ. ಕುದುರೆಮುಖದಿಂದ 5 ಕಿ.ಮೀ. ದೂರದಲ್ಲಿರುವ ಗ್ರಾಮಕ್ಕೆ ತೂಗುಸೇತುವೆ ದಾಟಿ, ನಂತರ 2 ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ.

ಗ್ರಾಮದಲ್ಲಿ ಮೊಬೈಲ್ ಸಂಪರ್ಕವೂ ಸಮರ್ಪಕವಾಗಿ ಇಲ್ಲದ ಕಾರಣ, ತುರ್ತು ಸಂದರ್ಭದಲ್ಲಿ ವಾಹನಗಳ ವ್ಯವಸ್ಥೆ ಮಾಡುವುದು ಕಷ್ಟಕರ ಸಂಗತಿಯಾಗಿದ್ದು, ರೋಗಿಗಳನ್ನು ಬಡಿಗೆ ಕಟ್ಟಿಕೊಂಡು ಹೊತ್ತುಕೊಂಡು ಹೆದ್ದಾರಿಯವರೆಗೆ ತಂದು, ನಂತರ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಬಿಳಗಲ್ ಗ್ರಾಮದ ಒಳಗಿನ ಹಳ್ಳಕ್ಕೆ  ಸೇತುವೆ ಇದೆಯಾದರೂ, ಊರನ್ನು ಸಂಪರ್ಕಿಸುವ ಭದ್ರಾ ನದಿಗೆ ಸೇತುವೆ ಇಲ್ಲದ ಕಾರಣ ಊರಿನ ಒಳಗಿನ ಚಿಕ್ಕ ಸೇತುವೆ ಉಪಯೋಗ ಆಗುತ್ತಿಲ್ಲ. ಬಿಳಗಲ್ ಸೇತುವೆಗೆ ಹಣ ಮಂಜೂರಾಗಿದೆ ಎಂದು ಶಾಸಕ ಕುಮಾರಸ್ವಾಮಿ ಅನೇಕ ಬಾರಿ ಹೇಳಿದ್ದಾರೆ. ಆದರೆ, ಅಧಿಕಾರಿಗಳು ಸೇತುವೆ ಕಾಮಗಾರಿಗೆ ಯಾಕೆ ಉತ್ಸಾಹ ತೋರುತ್ತಿಲ್ಲ ಎಂದು ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ  ವ್ಯಕ್ತಪಡಿಸಿದರು.

Join Whatsapp
Exit mobile version