ಶಿವಮೊಗ್ಗ: ಹೊಳೆಹೊನ್ನೂರು ಉಪ್ಪಾರ ಬೀದಿಯಲ್ಲಿರುವ ಹಳೆಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಎಸ್ಡಿಕಎಂಸಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಪಟ್ಟಣ ಪಂಚಾಯಿತಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
1ರಿಂದ 5ನೇ ವರೆಗೆ ತರಗತಿಗಳಿರುವ ಶಾಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕುಡಿಯುವ ನೀರಿನ ಕೊರತೆ , ಬಳಸಲು ಯೋಗ್ಯವಲ್ಲದ ಶೌಚಾಲಯದ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ಶೌಚಕ್ಕಾಗಿ ಮನೆಗಳಿಗೆ ಹೋಗಿ ಬರವ ಪರಿಸ್ಥಿತಿ ಇದೆ ಎಂದು ದೂರಿದರು.
ಈ ಬಗ್ಗೆ ಸ್ಥಳೀಯ ಪಂಚಾಯಿತಿ ಕಚೇರಿಗೆ ಹಲವಾರು ಬಾರಿ ಮನವಿ ನೀಡಲಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಸತ್ಯನಾರಾಯಣರಾವ್, ‘ಪಂಚಾಯಿತಿ ವತಿಯಿಂದ ತಕ್ಷಣ ಹೆಚ್ಚುವರಿ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ಶೌಚಾಲಯ ದುರಸ್ತಿ ಮಾಡಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಎಸ್ಡಿಸಎಂಸಿ ಅಧ್ಯಕ್ಷ ಕೆಂಚಪ್ಪ, ಸ್ಥಳೀಯ ಮುಖಂಡರಾದ ಎಂ.ಹರೀಶ್ಕುವಮಾರ್, ಎಚ್.ಕೆ.ಶ್ರೀನಿವಾಸ್, ಆರ್.ಉಮೇಶ್, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.