Home ಅಂಕಣಗಳು ಕಾರ್ಮಿಕರ ದಿನ : ಇತಿಹಾಸ, ವರ್ತಮಾನ, ಭವಿಷ್ಯ

ಕಾರ್ಮಿಕರ ದಿನ : ಇತಿಹಾಸ, ವರ್ತಮಾನ, ಭವಿಷ್ಯ

✍️ ಫಯಾಝ್ ದೊಡ್ಡಮನೆ, SDTU ರಾಜ್ಯ ಪ್ರಧಾನ ಕಾರ್ಯದರ್ಶಿ

ಕಳೆದ ವರ್ಷ ದೇಶದಲ್ಲಿ ಲಾಕ್‌ ಡೌನ್ ಘೋಷಣೆಯಾದಾಗ ವಲಸೆ ಕಾರ್ಮಿಕರ ಐತಿಹಾಸಿಕ ಮಹಾವಲಸೆಗೆ ದೇಶ ಸಾಕ್ಷಿಯಾಯಿತು. ಬಹುಶಃ ಕಾರ್ಮಿಕರ ಬಗೆಗಿನ ಚರ್ಚೆಯೂ ಕೂಡ ತಕ್ಕಮಟ್ಟಿಗೆ ನಡೆದಿತ್ತು. ಕಾರ್ಮಿಕರ ಬಗ್ಗೆ ಚರ್ಚೆಯೇ ಮಾಡದ ಅಥವಾ ಅವರ ಹೋರಾಟಗಳನ್ನು ಸಿನಿಕತನದಿಂದಲೇ ವೀಕ್ಷಿಸುತ್ತಿದ್ದ ದೇಶದ ಜನತೆ, ಅಂದಿನ ಮಟ್ಟಿಗೆ ‘ಕಾರ್ಮಿಕರು’ ನಮ್ಮವರು ಎಂಬಂತೆ ಅವರ ನಡಿಗೆಯ ಬಗ್ಗೆ ಮರುಕಪಟ್ಟಿತು. ಇದೀಗ ವರುಷ ಕಳೆದಿದೆ. ಕಾರ್ಮಿಕರಿಗೆ ಹೇಳಿಕೊಳ್ಳುವಂತಹ ಪರಿಹಾರನೂ ಸಿಗಲಿಲ್ಲ. ಅವರ ಸ್ಥಿತಿಗತಿಯೂ ಬದಲಾಗಿಲ್ಲ. ಈಗ ಮತ್ತೆ ಅವರು ಕೆಲಸಗಳಿಲ್ಲದ ದಿನಗಳಿಗೆ ಸರಿಯುತ್ತಿದ್ದಾರೆ, ಮತ್ತದೇ ಸಂಕಷ್ಟಗಳ ಮಧ್ಯೆ ಬರುತ್ತಿದೆ ಕಾರ್ಮಿಕರ ದಿನ.

ಏನಿದು ಕಾರ್ಮಿಕರ ದಿನ

ಬಂಡವಾಳಶಾಹಿ ವ್ಯವಸ್ಥೆಯು ಮಾಡುವ ಅತಿದೊಡ್ಡ ಶೋಷಣೆ ಕಾರ್ಮಿಕರ ಶೋಷಣೆ. ಕೈಗಾರಿಕೆಗಳ ಆರಂಭ ದಿನಗಳಲ್ಲಿ ಅತಿ ಹೆಚ್ಚಿನ ತಯಾರಿಕೆಗಾಗಿ ಕಾರ್ಮಿಕರನ್ನು ದಿನವೊಂದಕ್ಕೆ 10ರಿಂದ 15 ಗಂಟೆಗಳ ಕಾಲ ದುಡಿಸಲಾಗುತ್ತಿತ್ತು. ತಮ್ಮ ದುಡಿಮೆಯ ಸಮಯವನ್ನು 8 ಗಂಟೆ ಇಳಿಸಬೇಕು, 8 ಗಂಟೆಯ ಮನರಂಜನೆಯ ಮತ್ತು 8 ಗಂಟೆಯ ನಿದ್ದೆಯ ಹಕ್ಕನ್ನು ನೀಡಬೇಕು ಎಂಬ ಘೋಷವಾಕ್ಯದಡಿಯಲ್ಲಿ ಪ್ರತಿಭಟನಾ ಸಭೆಗಳನ್ನು ಅಮೆರಿಕದಲ್ಲಿ ಸಂಘಟಿಸಲಾಯಿತು. ಹೆಚ್ಚು ಕಡಿಮೆ ಎಲ್ಲಾ ದೇಶಗಳಲ್ಲೂ ಕಾರ್ಮಿಕರ ಹಕ್ಕುಗಳ ಬಗೆಗಿನ ಚರ್ಚೆಗಳು ಅವತ್ತಿನ ಕಾಲಘಟ್ಟದಲ್ಲಿ ನಡೆಯುತ್ತಲೇ ಇದ್ದವು. ಕಾಲ್‌ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ರವರ ಕಾರ್ಮಿಕರ ಬಗೆಗಿನ ಸಿದ್ಧಾಂತಗಳು ಹುಟ್ಟಿಕೊಂಡ ಸಂದರ್ಭವಾಗಿರುವುದರಿಂದ ಸಹಜವಾಗಿಯೇ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಚಿಕಾಗೋದಲ್ಲಿ ಹೆಯ್ ಮಾರ್ಕೆಟ್ ಬಳಿ ನಡೆದ ಪ್ರತಿಭಟನಾ ರ್ಯಾಲಿಗಳು ಅಕ್ಷರಶಃ ರಣಾಂಗಣವಾಯಿತು. ಮೇ 4ರಂದು ಪೊಲೀಸರು ನಡೆಸಿದ ದಂಡಪ್ರಯೋಗಕ್ಕೆ ಪ್ರತಿರೋಧವಾಗಿ ಬಾಂಬಿನ ಸದ್ದು ಮೇಳೈಸಿತು. ಈ ವೇಳೆ ಪೊಲೀಸರು ನಡೆಸಿದ ಫೈರಿಂಗ್‌ ಗೆ ನಾಗರಿಕರು ಸೇರಿ ಹಲವು ಜೀವಗಳು ಬಲಿಯಾದವು. ನೂರಾರು ಜನರು ಗಾಯಗೊಂಡರು. ತದನಂತರ ಪೊಲೀಸರ ವರ್ತನೆ ಮಗೀಯವಾಗಿತ್ತು. ಎಲ್ಲಾ ಕಾರ್ಮಿಕರನ್ನು ಸುತ್ತುವರೆದ ಪೊಲೀಸರು ನಾಲ್ವರು ಕಾರ್ಮಿಕರನ್ನು ಗಲ್ಲಿಗೇರಿಸಿದರು ಮತ್ತು ಇತರ ಕಾರ್ಮಿಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ಎಲ್ಲಾ ಘಟನೆಗಳಿಗೂ ಇರುವಂತೆ ಈ ಐತಿಹಾಸಿಕ ಚಳುವಳಿಗೂ ಪ್ರೇರಕ ಘಟನೆಯೊಂದಿತ್ತು. ಏಪ್ರಿಲ್ 21, 1856ರಂದು ಆಸ್ಟ್ರೇಲಿಯಾದ ಕಟ್ಟಡ ಕಾರ್ಮಿಕರು ಎಂಟು ಗಂಟೆಗಳ ಕೆಲಸದ ಅವಧಿಯ ಹಕ್ಕಿಗಾಗಿ ದೊಡ್ಡ ಹೋರಾಟವನ್ನು ಸಂಘಟಿಸಿದ್ದರು. ಈ ಹೋರಾಟದ ಯಶಸ್ಸು ಅಮೆರಿಕದಲ್ಲೂ ಪ್ರತಿಧ್ವನಿಸಿತು. ಅದರ ಒಟ್ಟಾರೆ ಫಲಿತಾಂಶವೇ ಚಿಕಾಗೋ ಘಟನೆ.

1889ರಲ್ಲಿ ‘ಸೆಕೆಂಡ್ ಇಂಟರ್ ನ್ಯಾಷನಲ್’ ಎಂಬ ಸಮಾಜವಾದಿ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟವು ಮೇ 1ರಂದು ಜಗತ್ತಿನಾದ್ಯಂತ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ ವನ್ನು ಆಚರಿಸಲು ಕರೆ ಕೊಟ್ಟಿತು. ಅಂದಿನಿಂದ ಮೇ 1ರಂದು ಕಾರ್ಮಿಕರ ರಜಾ ದಿನವನ್ನಾಗಿ ಆಚರಿಸಲು ಹಲವು ದೇಶಗಳು ಪ್ರಾರಂಭಿಸಿದವು. ಎರಡನೇ ಜಾಗತಿಕ ಯುದ್ಧದ ನಂತರ ಸಮಾಜವಾದಿ ದೇಶಗಳು ಮತ್ತು ಬಂಡವಾಳಶಾಹಿ ದೇಶಗಳ ನಡುವಿನ ಶೀತಲ ಸಮರದ ಅವಧಿಯಲ್ಲಿ ಕಾರ್ಮಿಕರ ದಿನವು ಅಭಿಮಾನದ ಸಂಕೇತವಾಗಿಯೇ ಬಳಸಲ್ಪಡುತ್ತಿತ್ತು. ರಷ್ಯಾದ ಬೆಂಬಲಿಗ ದೇಶಗಳ ಕಾರ್ಮಿಕರ ಬಗೆಗಿನ ನಿಲುವುಗಳು ಅಮೇರಿಕಾದಂತಹ ಬಂಡವಾಳಶಾಹಿ ದೇಶಗಳಿಗೆ ನೇರಾನೇರ ಸವಾಲೆಸೆಯುವ ಮಟ್ಟಿಗೆ ಈ ದಿನವು ಯಶಸ್ವಿಯಾಗಿದೆ ಎಂದೇ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ 1923ರಂದು ಅಧಿಕತವಾಗಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಅಂದಿನ ಮದ್ರಾಸು ಪ್ರಾಂತ್ಯದಲ್ಲಿ ‘ಲೇಬರ್ ಕಿಸಾನ್ ಪಾರ್ಟಿ’ಯು ಮೇ ದಿನವನ್ನು ಆಚರಿಸಲು ಆರಂಭಿಸಿತು. ಕೆಂಬಾವುಟದ ಮೊದಲ ಪ್ರಯೋಗವು ಭಾರತದಲ್ಲಿ ಅಂದಿನಿಂದಲೇ ಆರಂಭವಾಯಿತು. ಮದ್ರಾಸು ಹೈಕೋರ್ಟ್ ಮುಂಭಾಗದ ಬೀಚು ಸೇರಿದಂತೆ ಹಲವು ಬೀಚುಗಳನ್ನು ಹೆಚ್ಚಾಗಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗಿತ್ತು.

ಪ್ರಸಕ್ತವಾಗಿ ಇಂಟರ್ ನ್ಯಾಷನಲ್ ಲೇಬರ್ ಆರ್ಗಲೈಸೇಷನ್ (ಐಎಲ್‌ಒ) ಎಂಬ ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟವು ಕಾರ್ಮಿಕರ ದಿನದಂದು ಜಗತ್ತಿನಾದ್ಯಂತ ರ್ಯಾಲಿಗಳನ್ನು ಸಂಘಟಿಸುವ ಮೂಲಕ ಕಾರ್ಮಿಕರ ಮೇಲಿನ ದೌರ್ಜನ್ಯ ಬಗ್ಗೆ, ಕನಿಷ್ಠ ವೇತನ, ವಲಸಿಗ ಕಾರ್ಮಿಕರ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕೆಲವು ವರ್ಷಗಳಿಂದ ಬಾಲ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಐಎಲ್‌ ಒ ಹೆಚ್ಚಿನ ಕೆಲಸ ಮಾಡುತ್ತಿದೆ.

ಕಾರ್ಮಿಕ ದಿನಾಚರಣೆ ಕೇವಲ ರಜಾದಿನವಾಗದೇ ಕಾರ್ಮಿಕರ ಕಲ್ಯಾಣದ ನಿರ್ಧಾರಗಳ ದಿನವನ್ನಾಗಿ ಮಾಡಬೇಕಾದ ಜರೂರಿದೆ. ವಿಶಾಲವಾದ ದೇಶದಲ್ಲಿ ಅತಿ ಹೆಚ್ಚಿನ ಕಾರ್ಮಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಸಂಘಟಿತ ಕಾರ್ಮಿಕರು ತಕ್ಕಮಟ್ಟಿಗೆ ತಮ್ಮ ಹಕ್ಕುಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರೂ ಶೇಕಡಾ 90ರಷ್ಟಿರುವ ಅಸಂಘಟಿತ ವಲಯ ಇನ್ನೂ ಚೇತರಿಕೆ ಕಂಡೇ ಇಲ್ಲ. ಜಗತ್ತಿನಾದ್ಯಂತ ಕಾರ್ಮಿಕರ ಕಡೆಗಿನ ಶೋಷಣೆ ಅತಿಯಾಗಲು ಕಾರಣ ಬಂಡವಾಳಶಾಹಿ ವ್ಯವಸ್ಥೆಯಾದರೆ ಭಾರತದಲ್ಲಿ ಬಂಡವಾಳಶಾಹಿಯ ಜೊತೆಗೆ ಜಾತಿ ವ್ಯವಸ್ಥೆಯ ಕರಿನೆರಳು ಕೂಡ ಇದ್ದೇ ಇದೆ. ಬಲಿಷ್ಠ ಕಾರ್ಮಿಕ ಸಂಘಟನೆಗಳು ಕೂಡ ಅಸಂಘಟಿತ ವಲಯದ ಬಗ್ಗೆ ಗಂಭೀರವಾದಂತೆ ತೋರುತ್ತಿಲ್ಲ. ಕಾರ್ಮಿಕರನ್ನು ಸಿನಿಕರಂತೆ ನೋಡುವ ಸಾರ್ವಜನಿಕ ವಲಯ ಕೂಡ ಕನಿಷ್ಠ ಪಕ್ಷ ಕಾರ್ಮಿಕರ ಬಂದ್ ಘೋಷಣೆಗೂ ಬೆಂಬಲ ವ್ಯಕ್ತಪಡಿಸುವ ಸೌಜನ್ಯ ತೋರುತ್ತಿಲ್ಲ. ಹಾಗಾಗಿ ಪ್ರಭುತ್ವಕ್ಕೂ ಕಾರ್ಮಿಕರ ಬಗೆಗಿನ ವಿಚಾರಗಳ ಬಗ್ಗೆ ದೊಡ್ಡ ತಲೆನೋವಾಗಲಿ, ಅಧಿಕಾರ ಕಳೆದುಕೊಳ್ಳುವ ಭಯವಾಗಲಿ ಇಲ್ಲವೇ ಇಲ್ಲ. ಹಾಗಾಗಿ ಭಾರತದ ಬಡತನದ ನಿವಾರಣೆಯ ಕಾರ್ಯಕ್ರಮಗಳು ಫಲಕೊಡುತ್ತಿಲ್ಲವೆಂಬುದು ಅರ್ಥಮಾಡಬೇಕಾದ ವಿಚಾರ. ಕಾರ್ಮಿಕರ ಬಗೆಗಿನ ಅಸಡ್ಡೆಯ ಉತ್ತುಂಗ ಸ್ಥಿತಿಯೇ ಮಾಲಿಕರ ದರ್ಪಗಳಿಗೂ ಕಾರಣವಾಗುತ್ತಿದೆ.

ಕಳೆದ ಲಾಕ್‌ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡರೆ ಮಾಲಿಕರು ತಮ್ಮ ಸಿರಿವಂತಿಕೆಯನ್ನು ಹೆಚ್ಚಿಸುತ್ತಲೇ ಇದ್ದರು. ಭಾರತದ ಅತಿದೊಡ್ಡ ಸಿರಿವಂತ ಮುಕೇಶ್ ಅಂಬಾನಿ ನಿಮಿಷಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಿರುವಾಗ ತಮ್ಮದೇ ಕಂಪನಿಯ ಕಾರ್ಮಿಕರು ತಮ್ಮ ಭತ್ಯೆಗಳ ಕಡಿತ ಅನುಭವಿಸುತ್ತಲೇ ಇದ್ದರು. ಪ್ರಾಯಶಃ ಎಲ್ಲ ರಂಗಗಳಲ್ಲೂ ವ್ಯಾಪಿಸಿರುವ ರಿಲಯನ್ಸ್‌ ನ ಯಾವುದೇ ನಷ್ಟದ ಚಿತ್ರಣಗಳನ್ನು ನೋಡಲು ನಮಗೆ ಸಾಧ್ಯವಾಗಿಲ್ಲ. ಆದರೆ ಅವರ ಅಧಿಕೃತ ವಾರ್ತೆಯಂತೆ ಹೈಡ್ರೋಕಾರ್ಬನ್ ಕ್ಷೇತ್ರಗಳಲ್ಲಿ ತಕ್ಕಮಟ್ಟಿನ ಹೊಡೆತದ ಅನುಭವವಾದಾಗ ಸಿಇಒರಂತಹ ಸ್ಥಾನದ ಉದ್ಯೋಗಿಗಳು ಶೇಕಡಾ 30ರಿಂದ 50ರಷ್ಟು ಸಂಬಳ ಕಡಿತ ಅನುಭವಿಸಿದರೆ, ತಿಂಗಳಿಗೆ 30 ಸಾವಿರಕ್ಕೂ ಕಡಿಮೆ ಸಂಬಳದ ಕಾರ್ಮಿಕರು ಶೇಕಡಾ 10ರಷ್ಟು ಸಂಬಳ ಕಡಿತದ ಹೊಡೆತ ಅನುಭವಿಸಿದರು. ಇದೇ ರೂಪಕವನ್ನು ನೋಡುವುದಾದರೆ, ಎಲ್ಲಾ ಕ್ಷೇತ್ರಗಳಲ್ಲಿ ಲಾಭಗಳಿಸಿ ತನ್ನ ಸಂಪತ್ತನ್ನು ಹೆಚ್ಚಿಸುತ್ತಲೇ ಇರುವ ಮಾಲಿಕ ಒಂದು ಕ್ಷೇತ್ರದ ನಷ್ಟವನ್ನು ಕಾರ್ಮಿಕರಿಗೆ ಶೀಘ್ರದಲ್ಲಿಯೇ ವರ್ಗಾಯಿಸುತ್ತಾನೆ. ಇದು ಮಾಲಿಕ – ಕಾರ್ಮಿಕರ ನೈಜ ಸ್ಥಿತಿಗತಿ. ಮಾಲಿಕ ಲಾಭವನ್ನು ಸ್ವತಃ ಬಾಚಿಕೊಂಡರೆ, ನಷ್ಟವನ್ನು ಕಾರ್ಮಿಕರಿಗೆ ವರ್ಗಾಯಿಸದೆ ಬಿಡಲಾರ.

ಈಗೊಂದು ಅಂಕಿಅಂಶವನ್ನು ಗಮನಿಸೋಣ:

ಭಾರತದ ಕಂಪನಿಗಳ ಮಟ್ಟಿಗೆ ಅತಿ ಹೆಚ್ಚು ಆದಾಯವನ್ನು ಗಳಿಸುತ್ತಿರುವುದು ರಿಯಲನ್ಸ್ ಇಂಡಸ್ಟ್ರೀಸ್ ಲಿಮಿಡೆಟ್. ವರ್ಷಕ್ಕೆ 6,15,854 ಕೋಟಿ ರೂಪಾಯಿಗಳ ಆದಾಯ ಗಳಿಸುವ ಕಂಪನಿಯಾದರೂ, ಕಾರ್ಮಿಕರ ಸಂಖ್ಯೆಗನುಗುಣವಾಗಿ ನೋಡಿದರೆ ಒಂದನೇ ಸ್ಥಾನ ಪಡೆಯುವುದಿಲ್ಲ. ಅಂದರೆ ಹೆಚ್ಚು ಉದ್ಯೋಗಾವಕಾಶಗಳು ಕಾರ್ಮಿಕರಿಗಿಲ್ಲ. ಖಾಸಗಿ ಕಂಪನಿಗಳ ಮಟ್ಟಿಗೆ ಟಿಸಿಎಸ್ ಸುಮಾರು ಭಾರತದ 3 ಲಕ್ಷ ಕಾರ್ಮಿಕರನ್ನು ಒಳಗೊಂಡು ಅಗ್ರಸ್ಥಾನದಲ್ಲಿದೆ. ಒಟ್ಟಾರೆ ನೋಡುವುದಾದರೆ ಭಾರತದ ರೈಲ್ವೆ ಇಲಾಖೆ 14 ಲಕ್ಷ ಕಾರ್ಮಿಕರನ್ನು ಒಳಗೊಂಡು ಅಗ್ರಸ್ಥಾನದಲ್ಲಿದೆ.

ಕಾರ್ಮಿಕರ ವೃತ್ತಿ ಭದ್ರತೆಯನ್ನು ಗಮನಿಸೋಣ. ರಿಯಲನ್ಸ್ ಕಂಪನಿಯನ್ನೇ ರೂಪಕವಾಗಿಸಿ ವಿಶ್ಲೇಷಿಸಿದರೆ, ಅದರ ಅಧಿಕೃತ ವರದಿಯ ಪ್ರಕಾರ, 2018ಕ್ಕೆ ಒಟ್ಟು ಕಾರ್ಮಿಕರ ಸಂಖ್ಯೆ 1,87,729. ಅದರಲ್ಲಿ ಕೇವಲ 29,533  ಕಾರ್ಮಿಕರು ವೃತ್ತಿ ಭದ್ರತೆಯನ್ನು ಹೊಂದಿದ್ದಾರೆ. ಉಳಿದ 1,58,196 ಕಾರ್ಮಿಕರು ತಾತ್ಕಾಲಿಕ ವೃತ್ತಿಯಲ್ಲಿದ್ದಾರೆ. ಅಂದರೆ ಭದ್ರತೆಯನ್ನು ಹೊಂದಿಲ್ಲ. ಲಿಂಗ ಸಂವೇದನಾ ದೃಷ್ಟಿಯಲ್ಲಿ ನೋಡಿದರೆ, ಕೇವಲ 1521 ಮಂದಿ ಮಹಿಳಾ ಕಾರ್ಮಿಕರು. ತಮ್ಮ ಸಾಮಾಜಿಕ ನಿಲುವುಗಳನ್ನು ಈ ಅಂಕಿಅಂಶದಲ್ಲಿಯೇ ಅರ್ಥೈಸಬಹುದು.

ಕೇವಲ 70 ಮಂದಿ ವಿಕಲಾಂಗ ಕಾರ್ಮಿಕರು. ದೇಶದ ದೈತ್ಯ ಕಂಪನಿಗೆ ಆದಾಯದ ವಿಚಾರ ಬಿಟ್ಟರೆ ಇತರ ಸಾಮಾಜಿಕ ಆರ್ಥಿಕ ಸಂವೇದನೆಯಾಗಲಿ, ನಿಲುವುಗಳಾಗಲಿ ಇಲ್ಲ ಎಂದು ಹೇಳಬಹುದು. ಅಂದರೆ ಸಮಾಜದ ಪ್ರಾತಿನಿಧಿಕ ಜವಾಬ್ದಾರಿಯನ್ನು ತಾವು ಹೊಂದಿಲ್ಲ ಎಂದು ಬಹಳ ದಾರ್ಷ್ಟ್ಯತನದಿಂದಲೇ ಹೇಳುತ್ತಿದೆ.

ಕಾರ್ಮಿಕರ ಬಗ್ಗೆ ಸರಕಾರಗಳು ಸಂವೇದನಾಶೀಲರಾಗಿ ವರ್ತಿಸಿದರೆ ಮಾತ್ರ ಸಾಮಾಜಿಕ ಹಕ್ಕುಗಳ ಸರಿಯಾದ ಅನುಷ್ಠಾನ ಸಾಧ್ಯ. ಒಂದು ಸಮಾಜದಲ್ಲಿ ಹೆಚ್ಚು ಜನರು ಕಾರ್ಮಿಕರಾಗಿಯೂ ಕೆಲವೇ ಮಂದಿ ಮಾಲಿಕರಾಗಿಯೂ ಇರುವುದರಿಂದ ಸರಕಾರಗಳ ನೀತಿಗಳು ಕಾರ್ಮಿಕರ ಪರವಾಗಿಯೇ  ಇರಬೇಕಾಗುತ್ತದೆ.

ದೇಶದಲ್ಲಿ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಕಾಯಿದೆಯಿದ್ದರೂ ಸರಿಯಾದ ಅನುಷ್ಠಾನವಂತು ಆಗಿಯೇ ಇಲ್ಲ. ಸಮಾಜದ ಸಮತೋಲನವನ್ನು ಕಾಪಾಡಬೇಕಾದರೆ ಹೆಚ್ಚು ತೂಕವಿರುವ ಕಾರ್ಮಿಕರನ್ನು ಓಲೈಸಲೇ ಬೇಕಾಗುತ್ತದೆ. ಅಸಂಘಟಿತ ಕಾರ್ಮಿಕರನೂ/ಳೂ ಸಂಘಟಿತರಾಗಿ ಘನತೆಯೊಂದಿಗೆ ಬದುಕುವ ಸಾಮಾಜಿಕ ಭದ್ರತೆಯನ್ನು ನೀಡಿದರೆ ಸಮಾಜದ ಚಲನೆಯ ವ್ಯವಸ್ಥೆ ಮತ್ತಷ್ಟು ಸುಲಲಿತಗೊಳ್ಳುವುದು.     

Join Whatsapp
Exit mobile version