ಕುಂದಾಪುರದ ಯುವಕ ಸೌದಿಯಲ್ಲಿ ಅಪಘಾತದಲ್ಲಿ ನಿಧನ : ಅಂತ್ಯಕ್ರಿಯೆಗೆ ನೆರವಾದ ಅನಿವಾಸಿ ಸಂಘಟನೆಗಳು

Prasthutha|

ಜಿದ್ದಾ: ಸೌದಿ ಅರೇಬಿಯಾದ ತಾಯಿಫ್ ನ  ಸಫಾ‌ ಎಂಬಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟ ಕುಂದಾಪುರದ ಯುವಕನೊಬ್ಬನ ಅಂತ್ಯಕ್ರಿಯೆಯನ್ನು ಅನಿವಾಸಿ ಸಂಘಟನೆಗಳ‌ ನೆರವಿನೊಂದಿಗೆ ಸೆಪ್ಟಂಬರ್ 24 ರಂದು‌ ಇಲ್ಲಿನ ಜಫಾಲಿ‌ ದಫನ ಭೂಮಿಯಲ್ಲಿ ನೆರವೇರಿಸಲಾಗಿದೆ.

ಕುಂದಾಪುರದ ಗೋಲಿವಳಿ ಮೂಲದ ಇಫ್ತಿಕಾರ್ ಮಟ್ಟ ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದು, ಸಹಪ್ರಯಾಣಿಕನಾಗಿದ್ದ ಅವರ ಸ್ನೇಹಿತ ಸರ್ಫರಾಝ್ ಮಾಲಿ ತೀವ್ರವಾಗಿ ಗಾಯಗೊಂಡು ತಾಯಿಫ್ ನ ಕಿಂಗ್ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌದಿ ಅರೇಬಿಯಾದ ರಿಯಾದ್ ನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಇಫ್ತಿಕಾರ್ ಸೌದಿ ರಾಷ್ಟ್ರೀಯ ದಿನದ ರಜೆಯನ್ನು ಕಳೆಯುವುದಕ್ಕಾಗಿ ಸ್ನೇಹಿತನೊಂದಿಗೆ ಕಾರಿನಲ್ಲಿ ಜಿದ್ದಾಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಇನ್ನೊಂದು ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

- Advertisement -

ಇಫ್ತಿಕಾರ್ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫೋರಮ್ ನ್ನು ಸಂಪರ್ಕಿಸಿದ್ದು ಅಂತ್ಯಕ್ರಿಯೆಗೆ ನೆರವಾಗುವಂತೆ ಕೋರಿಕೊಂಡಿದ್ದರು.  ತಕ್ಷಣ ಕಾರ್ಯಪ್ರವೃತ್ತರಾದ ತಾಯಿಫ್ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ಮಲಿಕ್ ಇಡ್ಯಾ, ಅಶ್ರಫ್ ಸುನ್ನತ್ ಕೆರೆ ಮತ್ತು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷರಾದ ಇಮ್ತಿಯಾಜ್ ಕುಂದಾಪುರ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಕ್ಲಪ್ತ ಸಮಯಕ್ಕೆ ಸಂಬಂಧಪಟ್ಟ ಇಲಾಖೆಗೆ ದಾಖಲೆಗಳನ್ನು ಸಲ್ಲಿಸಿದರು. ನಂತರ ಆಸ್ಪತ್ರೆಯು  ಮೃತರ ಸಹೋದರ ಶುಐಬ್ ಮಟ್ಟ ರವರಿಗೆ ಮೃತದೇಹವನ್ನು ಹಸ್ತಾಂತರಿಸಿತು. ಆ ಬಳಿಕ ಸೆ.24 ರಂದು ಮಗ್ರಿಬ್ ನಮಾಜಿನ ಬಳಿಕ ತಾಯಿಫ್ ನ ಇಬ್ರಾಹಿಂ ಜಫಾಲಿ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಮೃತರ ಅಂತ್ಯಕ್ರಿಯೆಯಲ್ಲಿ ಡಿ ಕೆ ಎಸ್ ಸಿ ಕಾರ್ಯದರ್ಶಿ ಮಜೀದ್ ಕಣ್ಣಂಗಾರ್, ಕೆ.ಸಿ. ಎಫ್ ಅಧ್ಯಕ್ಷ ಇಕ್ಬಾಲ್ ಮದನಿ, ಐ ಎಸ್ ಎಫ್ ಸದಸ್ಯರಾದ ರಫೀಕ್ ಬುಡೋಳಿ, ತಾಯಿಫ್ ಫೈಟರ್ಸ್ ನ ಅಲ್ತಾಫ್ ಗುರುಪುರ ಮತ್ತು ಮೃತರ ಬಂಧು- ಮಿತ್ರರು ಭಾಗವಹಿಸಿದ್ದರು. ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ಇದರ ಅಧ್ಯಕ್ಷ ಕಲಂದರ್ ಸೂರಿಂಜೆ ಅವರು ಅಂತ್ಯಕ್ರಿಯೆಗೆ ಬೇಕಾದ ಅಗತ್ಯ ಮಾರ್ಗದರ್ಶನಗಳನ್ನು ನೀಡಿ ನೆರವಾದರು.

- Advertisement -