Home ಕರಾವಳಿ ಕುಂದಾಪುರ: ಅಪಾಯದ ಹಂತದಲ್ಲಿದ್ದ ಬೃಹತ್ ನೀರಿನ ಟ್ಯಾಂಕ್‌ ತೆರವು

ಕುಂದಾಪುರ: ಅಪಾಯದ ಹಂತದಲ್ಲಿದ್ದ ಬೃಹತ್ ನೀರಿನ ಟ್ಯಾಂಕ್‌ ತೆರವು

ಕುಂದಾಪುರ: ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್‌ನ್ನು ತೆರವುಗೊಳಿಸುವ ಕಾರ್ಯಾಚರಣೆ ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು.

ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೋಟೇಶ್ವರ ಗ್ರಾಪಂ ಎದುರಿನ ಗ್ರಾಮಲೆಕ್ಕಿಗರ ಕೊಠಡಿ ಹಿಂಭಾಗದಲ್ಲಿ ಈ ಬೃಹತ್ ನೀರಿನ ಟ್ಯಾಂಕ್ ಇದ್ದು, 1986ರಲ್ಲಿ ನಿರ್ಮಾಣವಾದ 2 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಹೆಡ್‌ಟಾಂಕ್‌ನಲ್ಲಿ ಸೋರಿಕೆ ಕಂಡುಬಂದಿದರಿಂದ ಕಳೆದ ಕಳೆದ ಹದಿನೈದು ವರ್ಷಗಳಿಂದ ಯಾವುದೇ ಉಪಯೋಗವೂ ಇಲ್ಲದೇ ಇದು ನಿರುಪಯುಕ್ತವಾಗಿತ್ತು. ಟ್ಯಾಂಕ್ ಶಿಥಿಲಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಪಂ ಕಟ್ಟಡ ಸಹಿತ ಇತರೆ ಅಂಗಡಿಗಳಿಗೆ ಅಪಾಯ ಇದ್ದ ಕಾರಣ, ಈ ಟ್ಯಾಂಕ್ ತೆರವಿನ ಬಗ್ಗೆ ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದ ಸಾಮರ್ಥ್ಯ ವರದಿ ಪಡೆದು ಟ್ಯಾಂಕ್ ಕೆಡವಲು ಅ.11ಮಂಗಳವಾರ ದಿನ ನಿಗದಿ ಮಾಡಿದ್ದರು.

ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಸಂಚಾರಿ ಠಾಣೆ, ಆರೋಗ್ಯ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಓವರ್ ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆ ಸಾಂಗವಾಗಿ ನಡೆಯಿತು. ಸುರತ್ಕಲ್ ಮೂಲದ 15-20 ಮಂದಿ ತಂಡ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಈ ವೇಳೆ ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಕೋಟೇಶ್ವರ ಗ್ರಾಪಂ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ಪಿಡಿಒ ದಿನೇಶ್ ನಾಯ್ಕ, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ಚಂದ್ರಮೋಹನ್, ನಾಗರಾಜ ಕಾಂಚನ್, ರಾಯ್ಸನ್ ಡಿಮೆಲ್ಲೋ, ಉದಯ್ ನಾಯಕ್, ರಾಜಶೇಖರ ಶೆಟ್ಟಿ, ರಾಜು ಮರಕಾಲ, ವಿವೇಕ್, ಸಂಚಾರಿ ಠಾಣೆ ಪಿಎಸ್‌ಐ ಸುಧಾ ಪ್ರಭು ಹಾಗೂ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು.

Join Whatsapp
Exit mobile version