Home ಟಾಪ್ ಸುದ್ದಿಗಳು ಕುಂಬಳೆ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ʼಬಬಿಯಾʼ ಇನ್ನಿಲ್ಲ

ಕುಂಬಳೆ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ʼಬಬಿಯಾʼ ಇನ್ನಿಲ್ಲ

ಕಾಸರಗೋಡು: ರಾಜ್ಯದ ಗಡಿಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನದ‘ಬಬಿಯಾ’ ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದಲ್ಲಿರುವ ಸಸ್ಯಹಾರಿ ಮೊಸಳೆ ಎಂದೇ ಬಬಿಯಾ ಪ್ರಖ್ಯಾತಿ ಪಡೆದಿತ್ತು. ಬಬಿಯಾ ಕಳೆದ 70 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿತ್ತು.

ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಿತು. ಈ ಬಬಿಯಾ ಮೊಸಲೆ ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿತ್ತು. ದೇವರ ಮೊಸಳೆ ಎಂದೇ ಇದು ಪ್ರಖ್ಯಾತಿ ಪಡೆದಿತ್ತು.

ಎರಡು ವರ್ಷಗಳ ಹಿಂದೆ ನೀರಿನಿಂದ ಹೊರ ಬಂದು ದೇಗುಲ ಪ್ರವೇಶಿಸಿದ್ದ ಬಬಿಯಾ, ಮೊದಲ ಬಾರಿಗೆ ದೇಗುಲದ ಆವರಣಕ್ಕೆ ಬಂದಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿತ್ತು.

ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರದಲ್ಲಿ ಸಿಗುವ ಕುಂಬ್ಳೆಗೆ ಸಮೀಪ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಾಗಿದಾಗ ಅನಂತಪುರ ದೇವಸ್ಥಾನ ಸಿಗುತ್ತದೆ. ಇದು ವಿಶಾಲವಾದ ಪ್ರದೇಶದಲ್ಲಿ ಕೆರೆ ಮಧ್ಯೆ ಇರುವ ದೇವಸ್ಥಾನ. ಅನಂತಪುರ ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಇದನ್ನು ಜನರು ಸರೋವರ ಕ್ಷೇತ್ರ ಅನಂತಪುರ ಎಂದೂ ಕರೆಯುತ್ತಾರೆ. ಇಲ್ಲಿ 5 ಹೆಡೆ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭ ಸ್ವಾಮಿಯನ್ನು ನೋಡಬಹುದು.

ಅನಂತಪುರ ದೇವಸ್ಥಾನದ ಮತ್ತೊಂದು ಆಕರ್ಷಣೆ ಎಂದರೆ ಬಬಿಯಾ. ಸಾಮಾನ್ಯವಾಗಿ ಮೊಸಳೆಗಳು ಮಾಂಸಹಾರಿಗಳು. ಆದರೆ ಬಬಿಯಾ ಸಸ್ಯಹಾರಿ ಎನ್ನುವುದು ವಿಶೇಷ. ಹಿಂದೆ ಬ್ರಿಟಿಷರು ಈ ಜಾಗದಲ್ಲಿ ಟೆಂಟ್ ಹಾಕಿದ್ದಾಗ ಕೆರೆಯಲ್ಲಿ ಮೊಸಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಬಬಿಯಾ ಎಂದು ಕರೆದಾಗ ಮೊಸಳೆ ಹೊರ ಬಂದಿತ್ತು. ಆಗ ಗುಂಡು ಹಾರಿಸಿ, ಮೊಸಳೆಯನ್ನು ಕೊಂದಿದ್ದರು. ಆ ಮೊಸಳೆ ಕೊಂದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿನಗಳ ನಂತರ ವಿಷ ಹಾವು ಕಚ್ಚಿ ಅಸುನೀಗಿದ ಎಂಬ ಕಥೆಯನ್ನು ಇಲ್ಲಿನ ಜನರ ಬಾಯಲ್ಲಿ ಕೇಳಬಹುದು.

Join Whatsapp
Exit mobile version