Home ಟಾಪ್ ಸುದ್ದಿಗಳು ಕೇಂದ್ರ ಬಿಜೆಪಿ ಆಡಿಷನ್ ಗಾಗಿ ಕುಮಾರಸ್ವಾಮಿ ಕಸರತ್ತು: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

ಕೇಂದ್ರ ಬಿಜೆಪಿ ಆಡಿಷನ್ ಗಾಗಿ ಕುಮಾರಸ್ವಾಮಿ ಕಸರತ್ತು: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

ಬೆಂಗಳೂರು: ಬಿಜೆಪಿಯವರು ಕಳೆದ ಮೂರು ತಿಂಗಳಿಂದ ಕುಮಾರಸ್ವಾಮಿ ಅವರ ಆಡಿಷನ್ ಮಾಡುತ್ತಿದೆ. ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೇಗೆ ವಾಗ್ದಾಳಿ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಮುಂದೆ ಅವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದರು.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್,ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದ್ದರೆ, ಯಾರದೋ ಮೇಲಿನ ಐಟಿ ದಾಳಿಗೆ ಕಾಂಗ್ರೆಸ್ ಜತೆ ನಂಟು ಹಾಕುತ್ತಿರುತ್ತಿರಲಿಲ್ಲ. ಇವರ ನಾಟಕವನ್ನು ಜನ ನೋಡುತ್ತಿದ್ದಾರೆ. ಅವರು ಮುಟ್ಟಾಳರಲ್ಲ. ಈಗಾಗಲೇ ಅವರು ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದ್ದು, ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸಲಿದ್ದಾರೆ.

ನಿನ್ನೆ ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಹಾಗೂ ಕುಮಾರಸ್ವಾಮಿ ಅವರಿಗೆ ಇದನ್ನು ಸಾಧ್ಯವಾದರೆ ಅರ್ಥ ಮಾಡಿಕೊಳ್ಳಲಿ. ಈ ಹೇಳಿಕೆಯಲ್ಲಿ ಎಲ್ಲಾದರೂ ಒಂದು ಕಡೆ ಇದಕ್ಕೂ ಕಾಂಗ್ರೆಸ್ ಮುಖಂಡರಿಗೆ ಲಿಂಕ್ ತೋರಿಸಿದ್ದಾರಾ?

ಐಟಿ ಇಲಾಖೆ ಹೇಳಿಕೆಯಲ್ಲಿ ತೆರಿಗೆ ವಂಚನೆ ಉದ್ದೇಶದಿಂದ ಕೆಲವು ಗುತ್ತಿಗೆದಾರರು, ವಾಸ್ತುಶಿಲ್ಪಿಗಳು ಹಣವನ್ನು ವೈಟ್ ಮಾತ್ರವಲ್ಲದೇ, ಡಿಜಿಟಲ್ ಮಾರ್ಗದಲ್ಲಿ ವ್ಯವಹಾರ ಮಾಡದೇ, ನಗದಿನ ರೂಪದಲ್ಲಿ ವ್ಯವಹಾರ ಮಾಡಿದ್ದಾರೆ. ಐಟಿ ಇಲಾಖೆ ಸ್ಪಷ್ಟ ಹೇಳಿಕೆ ನೀಡಿದ ನಂತರವೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಅವರಿಗೆ ಮರ್ಯಾದೆ ಇದೆಯಾ.

ಬಿಜೆಪಿ ರಾಜ್ಯವನ್ನು ದಿವಾಳಿ ಮಾಡಿತ್ತು. ಸಿದ್ದರಾಮಯ್ಯ ಅವರು ಸರ್ಕಾರ ಬರುವ ಮುಂಚೆಯೇ ಬಿಜೆಪಿ ಮಾಡಿರುವ ಅನಾಹುತ ಸರಿಪಡಿಸಲು ಕನಿಷ್ಠ 1 ವರ್ಷ ಸಮಯ ಬೇಕು ಎಂದು ಹೇಳಿದ್ದರು. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ.

ಬಿಜೆಪಿಯ ಒಕ್ಕಲಿಗ ಸಮುದಾಯದ ಮುಖಂಡರುಗಳ ಜತೆ ಸೇರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬವನ್ನು ಮುಗಿಸಲು ಹೊಂಚು ಹಾಕುತ್ತಿದ್ದಾರೆ. ನಾಳೆ ಏನಾದರೂ ಶಿವಕುಮಾರ್ ಅವರಿಗೆ ತೊಂದರೆ ಆದರೆ ಕುಮಾರಸ್ವಾಮಿ, ಸಿ.ಟಿ ರವಿ, ಅಸ್ವತ್ಥ್ ನಾರಾಯ, ಆರ್ ಅಶೋಕ್ ಅವರೇ ನೇರ ಕಾರಣ. ಶಿವಕುಮಾರ್ ಅವರು ಡಿಸಿಎಂ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಬ್ಯ್ರಾಂಡ್ ಬೆಂಗಳೂರು ಮಾಡಲು ಹೊರಟರೆ ಅದರ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ನಿಮ್ಮ ಯೋಗ್ಯತೆಗೆ ಬೆಂಗಳೂರಿಗೆ ಸರಿಯಾದ ಅನುದಾನ ನೀಡಲಿಲ್ಲ. ಬೆಂಗಳೂರಿನಲ್ಲಿ 25 ಸಾವಿರ ರಸ್ತೆಗುಂಡಿಗಳಿವೆ ಎಂದು ಕೋರ್ಟ್ ಗೆ ಅಫಿಡವಿಟ್ ಕೊಟ್ಟಿದ್ದಿರಿ. ಈಗ ನೀವು ಟೀಕೆ ಮಾಡುತ್ತೀರಾ?

ನನ್ನ ಪ್ರಕಾರ ಮೋದಿ ಅವರಿಗೆ ಕರ್ನಾಟಕ ಹಾಗೂ ಕನ್ನಡಿಗರನ್ನು ಕಂಡರೆ ಸಿಟ್ಟಿದೆ. ಅದೇ ಕಾರಣಕ್ಕೆ ಸುಮಾರು 15-20 ಚಿನ್ನಾಭರಣ ಮಳಿಗೆ ರೈಡ್ ಮಾಡಿಸಿದ್ದಾರೆ. ಇವರಿಗೂ ಕಾಂಗ್ರೆಸ್ ಗೂ ಏನು ಸಂಬಂಧ? ಇವರ ಜತೆಗೆ 25 ಜೋತಿಷ್ಯಿಗಳ ಮೇಲೂ ದಾಳಿ ಮಾಡಿಸಿದ್ದೀರಿ. ಅವರ ಮನೆಯಲ್ಲಿ ಏನು ಸಿಗದೇ ಇದ್ದಾಗ ಐಟಿ ಅಧಿಕಾರಿಗಳು ಜೋತಿಷ್ಯ ಕೇಳಿಕೊಂಡು ಹೋಗಿದ್ದಾರೆ.

ಕುಮಾರಸ್ವಾಮಿ ಅವರು ಬಹಳ ಬಾಲೀಶವಾಗಿ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೈಸೂರು ಮನೆ ಯಾರು ಕಟ್ಟುತ್ತಿದ್ದಾರೆ? ಬೆಂಗಳೂರಿನ ಮನೆ ನವೀಕರಣ ಮಾಡುತ್ತಿರುವವರು ಯಾರು? ನೀವೇ ಹೇಳಿ ಸ್ವಾಮಿ. ಬೆಂಗಳೂರಿನ ಮನೆ ಕೃಷ್ಣ ಹಾಗೂ ಕಾವೇರಿ. ಇವೆರಡೂ ಸಿದ್ದರಾಮಯ್ಯ ಅವರ ಸ್ವಂತ ಮನೆಯಲ್ಲ ಸರ್ಕಾರದಿಂದ ನೀಡಿರುವ ಮನೆ. ಇದರ ನವೀಕರಣವನ್ನು ಪಿಡಬ್ಲ್ಯೂಡಿ ಅವರು ಮಾಡುತ್ತಾರೆ. ಅದರಲ್ಲೂ ಹಿಟ್ ಅಂಡ್ ರನ್ ಮಾಡುತ್ತೀರಿ. ಮೈಸೂರು ಮನೆ ಕಟ್ಟಲು ಆರಂಭಿಸಿ ಐದು ವರ್ಷವಾಗಿದೆ. ಹಣದ ಕೊರತೆಯಿಂದ ನಾಲ್ಕನೇ ಮಹಡಿ ಅರ್ಧಕ್ಕೆ ನಿಂತಿದೆ. ಪೆಟ್ರೋಲ್ ಬಂಕ್ ಇರುವುದು 50X80 ವಿಸ್ತೀರ್ಣದಲ್ಲಿ. ಇದು ಸಿದ್ದರಾಮಯ್ಯ ಅವರ ಹೆಸರಲ್ಲಿ ಇಲ್ಲ. ಸಿದ್ದರಾಮಯ್ಯ ಅವರು ಹಾಲಿ ವಾಸವಿರುವ ಮನೆ ಬಾಡಿಗೆ ಮನೆ. ಸಿದ್ದರಾಮಯ್ಯ ಅವರ ಹೆಸರಲ್ಲಿರುವ ಆಸ್ತಿ ಮೊತ್ತ 26 ಲಕ್ಷ ಮಾತ್ರ. ಅವರ ಬಳಿ ಎಷ್ಟು ಪಂಚೆ ಇವೆ ಎಂಬುದನ್ನು ಮಾತ್ರ ನಾನು ಚುನಾವಣಾ ಅಫಿಡವಿಟ್ ನಲ್ಲಿ ಸೇರಿಸಿಲ್ಲ.

ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಿಕ್ಕಿಹಾಕಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಅವರಿಗೆ ಕೆಟ್ಟ ಹೆಸರು ತಂದು ನಿಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ. ನೀವು ಏನೆ ಮಾಡಿದರೂ ಪ್ರಯೋಜನವಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಗೆದ್ದರೂ ಅಚ್ಚರಿಪಡಬೇಕಾಗಿಲ್ಲ. ಬಿಜೆಪಿ ಮುಖಂಡರ ವಿರುದ್ಧ ದಾಳಿ ಮಾಡಿಸಿ.

2014ರಿಂದ 2023ರವರೆಗೆ ದೇಶದಲ್ಲಿ ಒಟ್ಟು 4 ಸಾವಿರ ಇಡಿ ದಾಳಿಗಳು ನಡೆದಿದ್ದು, ಇದರಲ್ಲಿ ಶೇ.90ರಷ್ಟು ದಾಳಿ ವಿರೋಧ ಪಕ್ಷಗಳ ನಾಯಕರ ಮೇಲೆ. ಇದರಲ್ಲಿ ಶಿಕ್ಷೆ ಪ್ರಮಾಣ ಕೇವಲ 23 ಜನರಿಗೆ ಮಾತ್ರ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಟ್ಟು ಇಡಿ ರೈಡ್ ಆಗಿದ್ದು ಕೇವಲ 112 ಮಾತ್ರ. 80 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಇನ್ನು ಐಟಿ ಇಲಾಖೆಯಲ್ಲಿ 2 ಸಾವಿರ ದಾಳಿ ಮಾಡಿದ್ದು 70 ಪ್ರಕರಣದಲ್ಲಿ ಶಿಕ್ಷೆ ಆಗಿದೆ. ನೀವು ಕೇವಲ ವಿರೋಧ ಪಕ್ಷಗಳ ವಿರುದ್ಧ ಅಸ್ತ್ರವಾಗಿ ಈ ಇಲಾಖೆ ಬಳಸಿಕೊಳ್ಳುತ್ತಿದ್ದೀರಿ.

ಸಾವಿರ ಕೋಟಿಯ ಲೆಕ್ಕ ಕೊಡುವ ಅಶೋಕ್ ಅವರೇ ನಿಮಗೆ ಮಾನ ಮರ್ಯಾದೆ ಇಲ್ಲವೇ? 650 ಬಿಬಿಎಂಪಿ ಬಿಲ್ ಪಾವತಿ ಆಗಿದ್ದು, ಅದರ ಕಮಿಷನ್ ಮೊತ್ತವೇ 42 ಕೋಟಿ ಎಂದು ನಿಮ್ಮ ಪಕ್ಷದವರು ಹೇಳುತ್ತಾರೆ. ಅಶೋಕ್ ಅವರು 1 ಸಾವಿರ ಕೋಟಿ ಲೆಕ್ಕ ನೀಡುತ್ತಾರೆ. 650 ಕೋಟಿ ಬಿಲ್ ಬಿಡುಗಡೆಗೆ ಸಾವಿರ ಕೋಟಿ ಕಮಿಷನ್ ನೀಡುತ್ತಾರಾ? ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲು ಏನೆಲ್ಲಾ ಮೋಡಬೇಕೋ ಅದನ್ನು ಮಾಡುತ್ತಿದ್ದಾರೆ.

ಕುಮಾರಸ್ವಾಮಿಯನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದು ಒಕ್ಕಲಿಗ ಸಮುದಾಯದವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಕುಮಾರಸ್ವಾಮಿ ಬಾಯಲ್ಲಿ ಬರುವುದು ಶೇ.99ರಷ್ಟು ಸುಳ್ಳು. ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಪಿತೂರಿ ಮಾಡಿದ್ದಾರೆ. ಒಕ್ಕಲಿಗರ ನಾಯಕರನ್ನು ಸಹಿಸಲು ಆಗುತ್ತಿಲ್ಲ. ಒಕ್ಕಲಿಗರು ಯಾರಿಗೆ ಪಾಠ ಕಲಿಸುತ್ತೀರ ನೀವೇ ನಿರ್ಧರಿಸಿ.

ಅವರಿಗೆ ತಾಕತ್ತು ಇದ್ದರೆ ಸರ್ಕಾರದ ಬಳಿ ಬಂದು ಮೇಕೆದಾಟು, ಮಹದಾಯಿ, ಕೃಷ್ಣಾ ವಿಚಾರವಾಗಿ ಮಾತನಾಡಲಿ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡಲಿ. ಬರದ ಹಿನ್ನೆಲೆಯಲ್ಲಿ ಕೇಂದ್ರ ಅನುದಾನ ಬಿಡುಗಡೆ ಮಾಡಲು ಒತ್ತಡ ಹಾಕಿ. ಎಂದಾದರೂ ಈ ಬಗ್ಗೆ ಮಾತನಾಡಿದಿರಾ? ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ಕರೆದರೆ ಬರುವುದಿಲ್ಲ. ನಿಮ್ಮ ಯೋಗ್ಯತೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿ.

ನಿಮ್ಮ ಮಾಜಿ ಸಚಿವರು 14 ಮಂದಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ತಡೆಯಾಜ್ಞೆ ತಂದಿದ್ದಾರೆ. 42 ಶಾಸಕರ ವಿರುದ್ದ ಕ್ರಿಮಿನಲ್ ಕೇಸ್ ಇತ್ತು. ಬಿಟ್ ಕಾಯಿನ್, ಪಿಎಸ್ ಐ, ಸಹಾಯಕ ಪ್ರಾಧ್ಯಪಕ ಹುದ್ದೆಯಿಂದ ಎಲ್ಲಾ ಅಕ್ರಮಗಳ ತನಿಖೆಗೆ ಆದೇಶ ನೀಡಿರುವುದು ನಿಮ್ಮಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಇದರ ಬಗ್ಗೆ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಸುಳ್ಳು ಹೇಳುತ್ತಿದ್ದಾರೆ.

ಬಿಜೆಪಿ ಅವಧಿಯಲ್ಲಿ ಕೊಟ್ಟಿರುವ ಕಿರುಕುಳ ಸುಳ್ಲು ಪ್ರಕರಣಗಳ ಬಗ್ಗೆ ತನಿಖೆ ಮಾಡದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ನಾಳೆ ನಾವು ಈ ವಿಚಾರವಾಗಿಯೇ ನಮ್ಮದೇ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ಮಾಡಬಹುದು. ಈ ವಿಚಾರವಾಗಿ ತಾರ್ಕಿಕ ಅಂತ್ಯ ತೆಗೆದುಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇವೆ.

ಇನ್ನು ವಿದ್ಯುತ್ ಕೊರತೆ ವಿಚಾರವಾಗಿ ಈಶ್ವರಪ್ಪ, ಬೊಮ್ಮಯಿ ಅವರು ಕತ್ತಲೆ ಭಾಗ್ಯ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಬಿಜೆಪಿ 10 ವರ್ಷ ಆಡಳಿತ ಮಾಡಿದ್ದು, ಅವರು ಎಲ್ಲಾದರೂ ವಿದ್ಯುತ್ ಉತ್ಪಾದನೆಗೆ ಹೊಸ ಯೋಜನೆ ಕೊಟ್ಟಿದ್ದಾರಾ? ಇಂದು ರಾಜ್ಯದಲ್ಲಿ 22 ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. 10536 ಮೆ.ವ್ಯಾ ಟ್ ವಿದ್ಯುತ್ ಉತ್ಪಾದಿಸಬಹುದು. ಇದರಲ್ಲಿ ಬಿಜೆಪಿ ಉತ್ಪಾದನೆ ಮಾಡಿದ್ದು 2 ಸಾವಿರ ಮೆ.ವ್ಯಾಟ್ ಮಾತ್ರ. ಬಿಜೆಪಿ ಅವಧಿಯಲ್ಲಿ ರಾಯಚೂರು ಥರ್ಮಲ್ ಪವರ್ ಪ್ಲಾಂಟ್ ಮುಚ್ಚಿಸಿದರು. ಕಾರಣ ಇವರು ಹೊರ ರಾಜ್ಯ ಹಾಗೂ ಖಾಸಗಿ ಅವರಿಂದ ವಿದ್ಯುತ್ ಖರೀದಿ ಮಾಡಬೇಕು, ಅದರಲ್ಲಿ ಕಮಿಷನ್ ಪಡೆಯುವುದು ಅವರ ಉದ್ದೇಶವಾಗಿತ್ತು.

ಪ್ರಸ್ತುತ ರಾಜ್ಯದಲ್ಲಿ 15 ಸಾವಿರ ಮೆ.ವ್ಯಾಟ್ ವಿದ್ಯುತ್ ಬೇಡಿಕೆ ಇದೆ. 6 ಸಾವಿರ ಮೆ.ವ್ಯಾಟ್ ಹೆಚ್ಚುವರಿ ಬೇಡಿಕೆ ಇದೆ. ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಬಳಕೆ ಕಡಿಮೆ ಇರುತ್ತಿತ್ತು. ಆದರೆ ಈ ಬಾರಿ ಮಳೆಗಾಲದ ಕೊರತೆಯಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಈಗ ನಿಂತುಹೋಗಿದ್ದ ಸ್ಥಾವರಗಳನ್ನು ಮತ್ತೆ ಆರಂಭಿಸಿದ್ದು, ರಾಜ್ಯದಲ್ಲಿ ಈಗ 2 ಸಾವಿರ ಮೆ.ವ್ಯಾಟ್ ವಿದ್ಯುತ್ ಕೊರತೆ ಇದೆ. ಅವುಗಳ ಖರೀದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾವು ನಿಮ್ಮಂತೆ ಕಮಿಷನ್ ಹೊಡೆಯುವುದಿಲ್ಲ.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪೊಮ್ಮುರಾಜ್ ಅವರು ಬೊಮ್ಮಾಯಿ ಅವರಿಗೆ 2020ರಲ್ಲಿ ಒಂದು ಪತ್ರ ಬರೆದಿರುತ್ತಾರೆ. ನೀವು ಇಲ್ಲೇ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶವಿದ್ದರೂ ಹೊರಗಡೆ ಖರೀದಿ ಮಾಡುತ್ತಿದ್ದೀರಿ. ಇದರಿಂದ ವರ್ಷಕ್ಕೆ 14 ಸಾವಿರ ಕೋಟಿ ಕರ್ನಾಟಕ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ನಾಲ್ಕು ವರ್ಷಕ್ಕೆ 60 ಸಾವಿರ ಕೋಟಿ. ನಾವು ಹೊರಗಿನವರಿಗೆ ಪ್ರತಿ ಯುನಿಟ್ ಅನ್ನು 4.80 ರೂಪಾಯಿಗೆ ಮಾರಾಟ ಮಾಡಿದರೆ, ಹೊರಗಿನಿಂದ ಖರೀದಿ ಮಾಡಲು 6.86 ರೂಪಾಯಿ ನೀಡಿದ್ದಾರೆ. ಇದರಲ್ಲಿ ಕಮಿಷನ್ ಮೊತ್ತ ಎಷ್ಟು? ಇದು ನನ್ನ ಆರೋಪವಲ್ಲ, ಪೊನ್ನುರಾಜ್ ಅವರು 14 ಅಕ್ಟೋಬರ್ 2020ರಲ್ಲಿ ಬರೆದಿರುವ ಪತ್ರದಲ್ಲಿರುವ ಅಂಶ.

ಇಂತಹವರು ವಿದ್ಯುತ್ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಯೋಗ್ಯತೆ ಇದ್ದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ. ಕಾವೇರಿ ಪ್ರಾಧಿಕಾರಕ್ಕೂ ಒಂದು ಪತ್ರ ಬರೆಸಲು ನಿಮ್ಮಿಂದ ಆಗಲಿಲ್ಲ. ಆಣೆಕಟ್ಟುಗಳ ಪರಿಸ್ಥಿತಿ ನೋಡಿ ಪರಿಶೀಲನೆ ಮಾಡಿಸಿ ಎಂದು ಮನವಿ ಮಾಡಿದರೂ ಒಂದು ತಂಡವನ್ನು ಕಳುಹಿಸಲಿಲ್ಲ. ಎರಡೂ ರಾಜ್ಯ ಹೊಡೆದಾಡಿಕೊಂಡು ಆ ರಾಜ್ಯಗಳಿಗೆ ಕೆಟ್ಟ ಹೆಸರು ಬರುವಂತೆ ಮಾಡಲಿ ಎಂದು ಸುಮ್ಮನಿದ್ದಾರೆ.

ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ದಿನಬೆಳಗಾದರೆ ಇವರ ಸುಳ್ಳು ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಜನರು 2024ರ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಗೆ ಮತ್ತೊಮ್ಮೆ ಪಾಠ ಕಲಿಸಿದಾಗ ಮಾತ್ರ ಅವರು ಸುಮ್ಮನಾಗುತ್ತಾರೆ.

ಕುಮಾರಸ್ವಾಮಿ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿ. ನೀವು ಎನ್ ಡಿಎ ಅನ್ನುತ್ತೀರಿ. ಅವರು ಇಂಡಿಯಾಗೆ ಬೆಂಬಲ ಎನ್ನುತ್ತಾರೆ. ನಿಮಗೆ ಮುಸಲ್ಮಾನರು, ಪರಿಶಿಷ್ಟ ಜಾತಿ, ಪಂಗಡ, ಇಂತರೆ ಸಮುದಾಯದವರು ಬೇಡವಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ನೀವೊಬ್ಬರೇ ಕಟ್ಟಿದ್ದೀರಾ? ಬೇರೆಯವರು ಕಟ್ಟಿಲ್ಲವೇ? ಚಾಮುಂಡಿ ಬೆಟ್ಟದ ಮೇಲೆ ಬಂದು ಸುಳ್ಳು ಹೇಳುತ್ತೀರಿ. ಇದನ್ನು ನೀವು ನಿಲ್ಲಿಸಬೇಕು. ಇಲ್ಲದಿದ್ದರೆ ಒಕ್ಕಲಿಗ ಸಮುದಾಯದವರೇ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ.

Join Whatsapp
Exit mobile version