Home ಟಾಪ್ ಸುದ್ದಿಗಳು ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ; ಕುಮಾರಸ್ವಾಮಿ ವ್ಯಂಗ್ಯ

ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ; ಕುಮಾರಸ್ವಾಮಿ ವ್ಯಂಗ್ಯ

ದಕ್ಷಿಣ ಭಾರತದ ರಾಜ್ಯಗಳು, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ವಿಚಾರದ ಮೂಲಕ ಒಡೆದುಹೋಗಬಾರದು. ನಮ್ಮ ಅಸ್ಮಿತೆಗಳ ರಕ್ಷಣೆಗಾಗಿ ನಾವು ಈಗ ಒಗ್ಗಟ್ಟಿನಿಂದ ಇರಬೇಕಾದ ಕಾಲ ಎಂಬುದನ್ನು ಸ್ಟಾಲಿನ್‌ಗಮನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸ್ಟಾಲಿನ್‌ಒಂದು ಮಾತು ಹೇಳಿದ್ದರು. ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಅಧಿಕೃತ ಭಾಷೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಈ ಪ್ರಯತ್ನದಲ್ಲಿ ನಾನೂ ಕೈಜೋಡಿಸುತ್ತೇನೆ. ಆದರೆ, ಅಣ್ಣತಮ್ಮಂದಿರಂತೆ ಇರಬೇಕಾದ ನಾವು ಕಾವೇರಿ ವಿಚಾರದಲ್ಲಿ ಕಲಹಕ್ಕಿಳಿಯುವುದರಲ್ಲಿ ಲಾಭವಿಲ್ಲ ಎಂದು ಸಲಹೆ ನೀಡಿದ್ದಾರೆ.
ರಾಜ್ಯದ ಜನ ಗಮನಿಸಬೇಕು. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವುದು ಪ್ರಾದೇಶಿಕ ಪಕ್ಷ. ಪ್ರಾದೇಶಿಕತೆ, ಅಸ್ಮಿತೆ ವಿಚಾರದಲ್ಲಿ ತಮಿಳುನಾಡು ಪ್ರಬಲವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರದಲ್ಲಿದ್ದರೂ ರಾಜ್ಯದ ಅಸ್ಮಿತೆ, ಪ್ರಾದೇಶಿಕತೆ ರಕ್ಷಣೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಹಿತರಕ್ಷಣೆಗೆ ಪ್ರಾದೇಶಿಕ ಪಕ್ಷವೇ ಅಗತ್ಯ.
ಮೇಕೆದಾಟು ಅಣೆಕಟ್ಟು ಯೋಜನೆ ರೂಪಿಸಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಗಿರಲಿಲ್ಲ. ನನ್ನ ಸರ್ಕಾರ ಅದನ್ನು ಜಾರಿಗೆ ತಂದು ಧೈರ್ಯ ತೋರಿತು. ಆದರೆ, ಅದನ್ನು ಉಳಿಸಿಕೊಳ್ಳಲೂ ಬಿಜೆಪಿಗೆ ಆಗುತ್ತಿಲ್ಲ. ರಾಜ್ಯ–ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಯೋಜನೆ ಅನಿಶ್ಚಿತತೆ ಎದುರಿಸುತ್ತಿದೆ. ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ ಎಂದು ತಿಳಿಸಿದ್ದಾರೆ.


ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡದಂತೆಯೂ, ಈ ವರ್ಷ ತಮಿಳುನಾಡಿಗೆ ಸಿಗಬೇಕಾದ ನೀರಿನ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ ಎಂದು ಟೀಕಿಸಿದೆ.
ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯ–ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಕೂಲವಾಗುವಂಥ ಹೆಜ್ಜೆ ಇಟ್ಟಿದೆ. ಇದರ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ. ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿರುವ ಬಿಜೆಪಿಗೆ ಇನ್ನು ನೆಲ–ಜಲ, ಭಾಷೆ–ನುಡಿಯ ಬಗ್ಗೆ ಅಕ್ಕರೆ ಇದ್ದೀತೆ? ಎಂದು ಮಾಜಿ ಮುಖ್ಯಮಂತ್ರಿ ಕುಟುಕಿದ್ದಾರೆ.

Join Whatsapp
Exit mobile version